ವಕ್ಫ್ ಎನ್ನುವುದು ಒಂದು ವಿಶೇಷ ಪರಿಕಲ್ಪನೆ. ಅದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಮಾತ್ರ ಒಳಪಡುವ ವಿಷಯ ವಲ್ಲ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ತರುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ. ಉದ್ದೇಶಿತ ವಕ್ಫ್ ಕಾಯ್ದೆಯ ತಿದ್ದುಪಡಿಯು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯನ್ನು ಮೊಟಕುಗೊಳಿ ಸುತ್ತದೆ ಎಂಬುದು ರಾಜ್ಯದ ಸರ್ಕಾರದ ಪ್ರತಿಪಾದನೆಯಾಗಿದೆ.==
*ಪ್ರಸ್ತಾವಿತ ಕೇಂದ್ರ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸದಿರಲು ಕರ್ನಾಟಕ ವಕ್ಫ್ ಮಂಡಳಿ ನಿರ್ಧರಿಸಿದೆ. ವಕ್ಫ್ ಮಂಡಳಿಯ ಆಡಳಿತ ಸಮಿತಿ ಸಭೆಯಲ್ಲಿ ತಿದ್ದುಪಡಿಯನ್ನು ವಿರೋಧಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ
ಹೊಸಶಕೆ ನ್ಯೂಸ್-ಬೆಂಗಳೂರು: ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರ ವನ್ನು ಒತ್ತಾಯಿಸಿ ಕೇರಳ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಈಗಾಗಲೇ ನಿರ್ಣಯ ಅಂಗೀಕರಿಸಿವೆ. ಅದರಂತೆ ರಾಜ್ಯ ಸರ್ಕಾರವು ಮಸೂದೆ ಹಿಂಪಡೆಯುವಂತೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ನಿರ್ಣಯ ಮಂಡಿಸಲು ಸಿದ್ಧತೆ ನಡೆಸಿದೆ.
ವಕ್ಫ್ ಮಸೂದೆಗೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಸಂಸತ್ತಿನ ಜಂಟಿ ಸಮಿತಿಯು (ಜೆಪಿಸಿ) 1995ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮಸೂದೆಗೆ (1995ರ ಕೇಂದ್ರ ಕಾಯ್ದೆ ಸಂಖ್ಯೆ 43) 14 ತಿದ್ದುಪಡಿಗಳನ್ನು ಪ್ರಸ್ತಾಪಿಸಿರುವ ವರದಿಯನ್ನು ಲೋಕಸಭೆಯಲ್ಲಿ ಈಗಾಗಲೇ ಮಂಡಿಸಿದೆ.
ಇದಕ್ಕೆ ಹಲವು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದು ರಾಜ್ಯ ಸರ್ಕಾರವು ಸಹ ವಕ್ಫ್ ಮಸೂದೆಗೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಸಡ್ಡು ಹೊಡೆಯಲು ಮಸೂದೆ ಹಿಂಪಡೆಯುವಂತೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ನಿರ್ಣಯ ಕೈಗೊಳ್ಳಲಿದೆ.
ಸಂವಿಧಾನದ ಒಕ್ಕೂಟ ತತ್ವಗಳು ಮತ್ತು ವಕ್ಫ್‌ನ ಮೇಲ್ವಿಚಾರಣೆಯ ಹೊಣೆ ಹೊಂದಿರುವ ಮಂಡಳಿಗಳಿಗೆ ವಿರುದ್ಧವಾಗಿದೆ. ವಕ್ಫ್ ಮತ್ತು ವಕ್ಫ್ ನ್ಯಾಯಮಂಡಳಿಯ ಮೇಲ್ವಿಚಾರಣೆಗೆ ಜವಾಬ್ದಾರರಾಗಿರುವ ಮಂಡಳಿಗಳ ಕಾರ್ಯಗಳು ಮತ್ತು ಅಧಿಕಾರಗಳನ್ನು ದುರ್ಬಲ ಗೊಳಿಸುತ್ತದೆ ಅಥವಾ ರದ್ದುಗೊಳಿಸುತ್ತದೆ. ಜೊತೆಗೆ, ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತ ದೃಷ್ಟಿಕೋನಗಳನ್ನು ಉಲ್ಲಂಘಿಸುತ್ತದೆ ಎಂಬುದು ರಾಜ್ಯ ಸರ್ಕಾರದ ವಾದವಾಗಿದೆ.
ಸಂವಿಧಾನದ 26ನೇ ವಿಧಿಯು ವಕ್ಫ್ ದತ್ತಿಗಳು ಮತ್ತು ವಕ್ಫ್ ಸಂಸ್ಥೆಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ಆಯಾ ಧಾರ್ಮಿಕ ಸಮುದಾಯಗಳಿಗೆ ಅದರ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳುವ ಹಕ್ಕನ್ನು ನೀಡಿದೆ. ಅಸ್ವಿತ್ವದಲ್ಲಿರುವ ವಕ್ಫ್ ಕಾಯ್ದೆಯು 1954ರಲ್ಲಿ ಭಾರತೀಯ ಸಂಸತ್ತು ಅಂಗೀಕರಿಸಿದ ಬಲವಾದ ಕಾನೂನು ಆಗಿದೆ. ನಂತರ 1995ರಲ್ಲಿ ಈ ಕಾಯ್ದೆಗೆ ಸಮಗ್ರವಾಗಿ ತಿದ್ದುಪಡಿ ಮಾಡಲಾಗಿತ್ತು.
1995ರ ವಕ್ಫ್ ಕಾಯ್ದೆಗೆ 2013ರಲ್ಲಿ ತಂದ ತಿದ್ದುಪಡಿಯೂ ಸೇರಿದಂತೆ ಈವರೆಗೆ ಮಾಡಿರುವ ತಿದ್ದುಪಡಿಗಳ ಪ್ರಕಾರ ಧಾರ್ಮಿಕ ಅಥವಾ ದತ್ತಿ ಉದ್ದೇಶ ಗಳಿಗಾಗಿ ಚರ ಅಥವಾ ಸ್ಥಿರ ಆಸ್ತಿ ಮತ್ತು ವಸ್ತುಗಳ ಪಾಲಕರಾಗಿ ರಾಜ್ಯ ವಕ್ಫ್ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ.ಕಾಯ್ದೆಯ ನಮೂದು 28ರ ಅಂಶವು (ದತ್ತಿ ಸಂಸ್ಥೆಗಳು, ದತ್ತಿ ಮತ್ತು ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಧಾರ್ಮಿಕ ಸಂಸ್ಥೆಗಳು) ಸಮವರ್ತಿ ಪಟ್ಟಿಯಲ್ಲಿದೆ.
ಪ್ರಸ್ತಾವಿತ ಕೇಂದ್ರ ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸದಿರಲು ಕರ್ನಾಟಕ ವಕ್ಫ್ ಮಂಡಳಿ ನಿರ್ಧರಿಸಿದೆ. ವಕ್ಫ್ ಮಂಡಳಿಯ ಆಡಳಿತ ಸಮಿತಿ ಸಭೆಯಲ್ಲಿ ತಿದ್ದುಪಡಿಯನ್ನು ವಿರೋಧಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ. ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಇದರ ವಿರುದ್ಧ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸುವಂತೆಯೂ ಸಭೆ ಶಿಫಾರಸು ಮಾಡಿತು. ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಅನ್ವರ್ ಬಾಷಾ ಉಪಸ್ಥಿತರಿದ್ದರು. ಸಭೆಯ ನಂತರ ಸಚಿವರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ನಿರ್ಣಯದ ಪ್ರತಿಯನ್ನು ಸಲ್ಲಿಸಿದರು, ತಿದ್ದುಪಡಿಯನ್ನು ವಿರೋಧಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಒತ್ತಾಯಿಸಿದರು.