144 ವರ್ಷಗಳ ನಂತರ ನಡೆಯತ್ತಿರುವ ಮಹಾಕುಂಭ ಮೇಳಕ್ಕೆ ಪ್ರಯಾಣ ಮಾಡಿ ಪ್ರಯಾಗರಾಜ್ ನ ತ್ರಿವೇಣಿ ಸಂಗಮದಲ್ಲಿ ಪುನೀತರಾಗಿ ಹಲವರು ಕಾಶಿಗೆ ಹೋಗಿ ಶ್ರೀ ವಿಶ್ವನಾಥನ ದರ್ಶನ ಪಡೆದುಕೊಂಡು ಬರುತ್ತಿರುವುದು ನಿರಂತರವಾಗಿ ನಡೆಯುತ್ತಲೇ ಇದೆ. ಆದರೆ ಅಸಮರ್ಥರಾದವರು ಕಾಶಿಗೆ ಹೋಗಲು ಆಗುವುದಿಲ್ಲ. ಅಂಥವರು ನೇರವಾಗಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರ ಗ್ರಾಮದಲ್ಲಿ ಇರುವ ಅತ್ಯಂತ ಪುರಾತನವಾದ, ವೈಶಿಷ್ಟ್ಯಪೂರ್ಣವಾದ ಅಪಾರ ಮಹಿಮೆಯಳ್ಳ ಶ್ರೀ ಕಾಶಿ ವಿಶ್ವನಾಥನ ದೇವಸ್ಥಾನಕ್ಕೆ ಬೇಟಿ ನೀಡಬಹುದಾಗಿದೆ.
ಇದೇ ತಿಂಗಳು 28 ರಂದು ಜರುಗುವ ರಥೋತ್ಸವ ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ನಡೆಯುತ್ತಿದೆ. ಭಕ್ತರೆಲ್ಲರೂ ಸೇರಿ ತನು-ಮನ-ಧನಗಳ ಸಹಾಯದೊಂದಿಗೆ ಕಳೆದ ವರ್ಷ ನಿರ್ಮಾಣಗೊಂಡ ರಥವನ್ನು ಶಿವರಾತ್ರಿ ಅಮವಾಸ್ಯೆಯ ಮರುದಿನ ಗ್ರಾಮದ ರಾಜ ಬೀದಿಗಳಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ರಥೋತ್ಸವ ನಡೆಯುತ್ತದೆ.
ಈ ಗ್ರಾಮದ ಕಾಶಿ ವಿಶ್ವನಾಥ ದೇವರು ಭಕ್ತರ ಆರಾಧ್ಯ ದೈವನಾಗಿ ರೂಪುಗೊಳ್ಳುವಲ್ಲಿ ಒಂದು ಐತಿಹಾಸಿಕ ಹಿನ್ನಲೆಯು ಅತ್ಯಂತ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತಲಿದೆ. ತಲ್ಲೂರು ಗ್ರಾಮದ ಶ್ರೀ ಕಾಶಿ ವಿಶ್ವನಾಥ ಮಂದಿರದಲ್ಲಿ ಅತ್ಯಂತ ವಿರಳವಾಗಿ ಹಾಗೂ ಬೆರಳೆಣಿಕೆಯಷ್ಟೇ ಇರುವ ಪಂಚಮುಖಿಗಳನ್ನು ಹೊಂದಿರುವ ಶಿವಲಿಂಗವು ಇಲ್ಲಿ ಇರುವುದರಿಂದಲೇ ಈ ಗ್ರಾಮವು ಪೌರಾಣಿಕವಾಗಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ.
ಉತ್ತರ ಪ್ರದೇಶದಲ್ಲಿರುವ ಕಾಶಿಗೂ ಹಾಗೂ ಈ ತಲ್ಲೂರಿಗೂ ಎತ್ತಿಂದೆತ್ತಣ ಸಂಬಂಧ ..!? ಎಂಬ ಪ್ರಶ್ನೆಗೆ ಈ ದೇವಸ್ಥಾನದ ಐತಿಹಾಸಿಕ ಹಿನ್ನೆಲೆಯನ್ನು ಹಾಗೂ ಪೌರಾಣಿಕ ಹಿನ್ನಲೆಯುಳ್ಳ ಕೆಲವು ನೈಜ ಘಟನೆಗಳನ್ನು ಕೆದಕಿ ಹುಡುಕಿದಾಗ ಅತ್ಯಂತ ಕುತೂಹಲಕಾರಿಯಾದ ನಿಕಟ ಸಂಬಂಧ ಇರುವುದು ಕಂಡುಬರುತ್ತದೆ.
ತಲ್ಲೂರು ಗ್ರಾಮವು ಎರಡನೆಯ ಕಾಶಿ ಎಂಬ ಬಿರುದನ್ನು ಪಡೆಯುವಲ್ಲಿ ಈ ಒಂದು ಪುರಾತನ ಘಟನೆಯು ಕಾರಣವೆಂದು ಹೇಳಲಾಗುತ್ತದೆ.
ಸುಮಾರು ೧೬-೧೭ನೇ ಶತಮಾನದಲ್ಲಿ ಶಿವಭಕ್ತನಾದ ಆಗಿನ ದೊರೆಯು ಕಾಶಿಯಿಂದ ಒಂದು ಪಂಚಮುಖಿ ಶಿವಲಿಂಗವನ್ನು ತಂದು ಪ್ರತಿಷ್ಠಾಪನೆ ಮಾಡಲು ಪಾನಬಟ್ಟಲು ಸಿಗದ ಕಾರಣ ಚಿಂತಾಕ್ರಾಂತನಾಗುತ್ತಾನೆ. ಆಗ ಒಂದು ದಿನ ರಾಜನ ಕನಸಿನಲ್ಲಿ ಶಿವನು ಬಂದು ತಲ್ಲೂರು ಎಂಬ ಗ್ರಾಮದ ದೇಸಾಯರ ಹೊಲದಲ್ಲಿ ಪಾನಬಟ್ಟಲು ಇದೆ ಎಂದು ಅಂತರ್ವಾಣಿಯಾಗುತ್ತದೆ. ಕೂಡಲೇ ರಾಜನು ತನ್ನ ದಂಡು -ದೌಲತ್ತುಗಳನ್ನು ತೆಗೆದುಕೊಂಡು ತಲ್ಲೂರು ಗ್ರಾಮಕ್ಕೆ ಬಂದು ಕನಸಿನಲ್ಲಿ ಹೇಳಿದಂತೆ ಪುರಾತನ ಬಾವಿಯ ಆಳದಲ್ಲಿ ಇದ್ದ ಪಾನಬಟ್ಟಲನ್ನು ಹುಡುಕಿ ತಾನು ತಂದಿದ್ದ ಕಾಶಿ ವಿಶ್ವನಾಥನ ಮೂರ್ತಿಯನ್ನು ಇದಕ್ಕೆ ಜೋಡಿಸಲಾಗಿ ಒಂದಕ್ಕೊಂದು ಕೂದಲೆಳೆಯಷ್ಟು ವ್ಯತ್ಯಾಸವಿಲ್ಲದೆ ಹೊಂದಿಕೊಂಡವೆಂದು ಪುರಾಣಗಳು ಸಾರಿ ಸಾರಿ ಹೇಳುತ್ತವೆ..!
ಅಷ್ಟೇ ಅಲ್ಲ..!! ಅವುಗಳ ಬಣ್ಣವೂ ಕೂಡಾ ಒಂದೇ ತೆರನಾಗಿತ್ತು ಎಂಬುದು ಇನ್ನೂ ಆಶ್ಚರ್ಯಕರವಾಗಿತ್ತು…!!ಕೂಡಲೇ ರಾಜನು ಇಲ್ಲಿಯೇ ಅಂದರೆ ತಲ್ಲೂರು ಗ್ರಾಮದಲ್ಲಿಯೇ ಕಾಶಿವಿಶ್ವನಾಥ ದೇವರನ್ನು ವಿಜೃಂಭಣೆಯಿಂದ ಭಕ್ತಿಪೂರ್ವಕವಾಗಿ ಪ್ರತಿಷ್ಠಾಪನೆ ಮಾಡಿದನೆಂದು ಪ್ರತೀತಿ ಜನಜನಿತವಾಗಿದೆ. ಗ್ರಾಮಸ್ಥರ ಮನಸ್ಸಿನಲ್ಲಿ ಬೇರೂರಿದ ಈ ಒಂದು ನೈಜ ಘಟನೆಯಿಂದಾಗಿ ತಲ್ಲೂರು ಇಂದು ಎರಡನೆಯ ಕಾಶಿಯಂತೆ ಕಂಗೊಳಿಸುತ್ತಿದೆ.
ಆ ಪ್ರಯುಕ್ತ ಮಹಾರಾಜನು ಪ್ರತಿವರ್ಷವೂ ಕಾಶಿವಿಶ್ವನಾಥ ದೇವರ ಜಾತ್ರೆಯನ್ನು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ, ಸೊಗಸಾಗಿ, ನಿರಾತಂಕವಾಗಿ ಮಾಡುತ್ತಾ ಬಂದಿದ್ದನು ಎಂಬುದು ಸ್ಥಳೀಯ ಪುರಾಣ ಕಥೆಗಳಿಂದ ತಿಳಿದುಬರುತ್ತದೆ.
ಆ ಒಂದು ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿರುವ ಗ್ರಾಮಸ್ಥರ ಕಾರ್ಯ ಶ್ಲಾಘನೀಯ. ಇತ್ತೀಚಿನ ವರ್ಷಗಳಲ್ಲಿಯಂತೂ ಪುರಾಣ ಪ್ರವಚನ ಕಾರ್ಯಕ್ರಮಗಳು ವಿಶೇಷವಾಗಿ ನಡೆಯುತ್ತಿದ್ದು ಜನರು ತಂಡೋಪತಂಡವಾಗಿ ತಲ್ಲೂರಿಗೆ ಆಗಮಿಸುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ತಮ್ಮ ಸೇವೆಯನ್ನು ಸಲ್ಲಿಸಿ ಕೃತಾರ್ಥರಾಗುತ್ತಿದ್ದಾರೆ.
ಅದರಂತೆ 26 ನೇ ತಾರೀಖಿನಂದು ತಲ್ಲೂರ ತಾಂಡಾದ ಶ್ರೀ ಸಂತ ಸೇವಾಲಾಲ್ ಸೇವಾ ಸಮೀತಿಯವರಿಂದ ಕಳಸಾರೋಹಣ ಸೇವೆ ನಡೆಯುತ್ತದೆ. ಗ್ರಾಮಸ್ಥರಿಂದ ಮಹಾಶಿವರಾತ್ರಿಯ ಜಾಗರಣೆ ಕಾರ್ಯವು ಸೊಗಸಾಗಿ ನಡೆಯುತ್ತದೆ. ಮರುದಿನ ಅಂದರೆ 27 ರಂದು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಕಾಶಿವಿಶ್ವನಾಥ ದೇವರಿಗೆ ಮಹಾರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮವು ಊರಿನ ಪೂಜ್ಯರಾದ ಶ್ರೀ ಅಂದಯ್ಯು ಹಿರೇಮಠ ಸ್ವಾಮಿಗಳಿಂದ ವಿಧಿವತ್ತಾಗಿ ನಡೆಯುತ್ತದೆ. ತದನಂತರದಲ್ಲಿ ಊರಿನ ರಾಜಬೀದಿಯಲ್ಲಿ ಮುತ್ತೈದೆಯರಿಂದ ಕಳಸ,ಕನ್ನಡಿಯೊಂದಿಗೆ ವಾದ್ಯ ವೈಭವದೊಂದಿಗೆ ನಡೆಯುವ ಕುಂಭದ ಮೆರವಣಿಗೆಯನ್ನು ನೋಡಲು ಎರಡು ಕಣ್ಣು ಸಾಲದು ಎಂಬಂತೆ ಅದ್ದೂರಿಯಾಗಿ ನಡೆಯುತ್ತದೆ.
ದಿನಾಂಕ 28 ರಂದು ಸಾಮೂಹಿಕ ವಿವಾಹಗಳು ಮತ್ತು ಸಾಲಭಾವಿ ಗ್ರಾಮಸ್ಥರಿಂದ ಮಹಾರಥೋತ್ಸವಕ್ಕೆ ರುದ್ರಾಕ್ಷಿ ಮಾಲೆಗಳ ಸೇವಾ ಸಮರ್ಪಣೆಯು ಆಗುತ್ತದೆ. ನಂತರ ನೂತನ ಮಹಾರಥೋತ್ಸವಕ್ಕೆ ಮದ್ಲೂರ ಗ್ರಾಮದ ಸದ್ಭಕ್ತರಿಂದ ನಂದಿಕೋಲು ಮತ್ತು ತೇರಿಗೆ ಹಗ್ಗದ ಸೇವೆಯನ್ನು ಮಾಡಲಾಗುತ್ತದೆ. ಅಂದೇ ಸಾಯಂಕಾಲ 4 ಗಂಟೆಗೆ ದಾರ್ಮಿಕ ಕಾರ್ಯಕ್ರಮ, ಪುರಾಣ ಪ್ರವಚನದ ಮಹಾಮಂಗಲೋತ್ಸವ, ನಾಡಿನ ಹರ-ಗುರು ಚರಮೂರ್ತಿಗಳಿಂದ ಆಶೀರ್ವಚನ ನಡೆಯುತ್ತದೆ. ಸಾಯಂಕಾಲ 5:30 ಕ್ಕೆ ದ್ವಿತೀಯ ವರ್ಷದ ಮಹಾರಥೋತ್ಸವಕ್ಕೆ ಚಾಲನೆ ನೀಡುವ ಕಾರ್ಯಕ್ರಮವನ್ನು ಯಲಬುರ್ಗಾದ ಪೂಜ್ಯರಾದ ಶ್ರೀ ಷ.ಬ್ರ.108 ಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತ ಹಸ್ತದಿಂದ ನೆರವೇರಿಸಲಾಗುವುದು.
ಇದರಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಸಾಗರೋಪಾದಿಯಲ್ಲಿ ಬಂದು ಪಾಲ್ಗೊಂಡು ಕಾಶಿ ವಿಶ್ವನಾಥನ ದರ್ಶನಾಶೀರ್ವಾದ ಪಡೆದು ಪುನೀತರಾಗುತ್ತಾರೆ. ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸುವರಿಂದಲೇ ಈ ಗ್ರಾಮವು ಎರಡನೆಯ ಕಾಶಿ ಎಂದು ಪ್ರಸಿದ್ಧಿ ಪಡೆದಿದೆ.
-ಶ್ರೀನಿವಾಸ. ಎನ್. ದೇಸಾಯಿ ತಲ್ಲೂರ ಶಿಕ್ಷಕರು.
ಸ.ಮಾ.ಹಿ.ಪ್ರಾ.ಶಾಲೆ ವಿದ್ಯಾನಗರ ಕುಷ್ಟಗಿ