ಗಜೇಂದ್ರಗಡ: ತಾಲೂಕಿನ ಸೂಡಿ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳನ್ನು ಪಿಡಿಓ ಅಶೋಕ ಕಂಬಿ ಕಾನೂನಿ ಪಾಠ ಹೇಳಿ ಸಭೆಯಿಂದ ಹೊರಗೆ ಕಳಿಸಿದ ಬಳಿಕ ಸಭೆ ನಡೆಸಿದ ಘಟನೆ ನಡೆದಿದೆ.
ಸಾಮಾನ್ಯ ಸಭೆಯಿರುವ ಕುರಿತು ಗ್ರಾಮಸ್ಥರು ಮಾಧ್ಯಮ ಪ್ರತಿನಿಧಿಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆಯ ವರದಿ ಮಾಡಲು ತೆರಳಿದ್ದರು. ಆದರೆ ಸಭೆ ಆರಂಭಕ್ಕೂ ಮೊದಲು ಕಂಪ್ಯೂಟರ್ ಆಪರೇಟರ್ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಸ್ವಾಗತ ಕೊರಿದರು. ಬಳಿಕ ಪಿಡಿಓ ಅಶೋಕ ಕಂಬಿ ನಿಮ್ಮನ್ನು ಸಭೆಗೆ ಆಹ್ವಾನಿಸಿಲ್ಲ. ಹೀಗಾಗಿ ಕಾನೂನಿನಲ್ಲಿ ನಿಮಗೆ ಸಭೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದರು.
ಕೆಲ ಸದಸ್ಯರ ಸಲಹೆಯಂತೆ ಮೇಲಾಧಿಕಾರಿಗಳಿಗೆ ಕರೆ ಮಾಡಿ ಈ ಕುರಿತು ಮಾಹಿತಿ ಪಡೆದು ಸಭೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಲು ಅಧ್ಯಕ್ಷರ ಪರವಾನಗಿ ನೀಡಿದರೆ ಮಾತ್ರ ಕಾನೂನಿನಲ್ಲಿ ಅವಕಾಶವಿದೆ ಎಂದರು. ಬಳಿಕ ಅಧ್ಯಕ್ಷೆ ಖಾದರಬಿ ಮುಜಾವರ ಅವರನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಸಭೆಯಲ್ಲಿ ಭಾಗವಹಿಸಲು ನಾನು ಅವಕಾಶ ಕೊಡುವುದಿಲ್ಲ. ಸಭೆ ಬಳಿಕ ವರದಿ ನೀಡುತ್ತೇವೆ ಎಂದರು. ಹೀಗಾಗಿ ಮಾಧ್ಯಮ ಪ್ರತಿನಿಧಿಗಳು ಸಭೆಯಿಂದ ಹೊರ ನಡೆದರು.
ಪುರಸಭೆ, ಪಟ್ಟಣ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಜಿ.ಪಂ ಸೇರಿ ಇತರ ಸಾಮಾನ್ಯ ಸಭೆಗಳಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶ ಇದೆ, ಆದರೆ ಸೂಡಿ ಗ್ರಾ.ಪಂ ಪಿಡಿಓ ನಡೆಯ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದ್ದು, ಪ್ರತಿಕಾ ಮಾಧ್ಯಮದವರು ಪಿಡಿಓ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.