ಕಾಸರಗೋಡು( ಕೆರಳ) : ಇಲ್ಲಿನ ಕಾಸರಗೋಡು ಜಿಲ್ಲಾ ಕನ್ನಡ ಪ್ರತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವ ಹಾಗೂ ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೊಡಮಾಡುವ ವಿವಿಧ ದತ್ತಿನಿಧಿ ಪ್ರಶಸ್ತಿಗಳ ಪೈಕಿ ಶ್ರೀ ಜೋಸೆಫ್ ಮಥಾಯಿಸ್ ದುಬೈ ಅವರು ನೀಡುವ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ ಸಮಿತಿ ಕೊಪ್ಪಳ ಜಿಲ್ಲೆಯ ಟಿವಿ 5 ವಾಹಿನಿಯ ಜಿಲ್ಲಾವರದಿಗಾರ ನಾಗರಾಜ್. ವೈ ಅವರನ್ನು ಆಯ್ಕೆ ಮಾಡಿದೆ.. ನಾಗರಾಜ್.ವೈ 12 ವರ್ಷಗಳ ಕಾಲ ಎಲೆಕ್ಟ್ರಾನಿಕ್ ಮಿಡಿಯಾದಲ್ಲಿ ಮಾಡಿದ ಹಲವಾರು ಸಾಮಾಜಿಕ ವರದಿಗಳನ್ನು ಆಧಾರಿಸಿ ಆಯ್ಕೆ ಸಮಿತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಮಾರು 2 ದಶಕಗಳ ಸೇವೆಯಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ಕೇರಳದಲ್ಲಿ ಜನಮನ್ನಣೆಗೆ ಪಾತ್ರವಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ಇಲ್ಲಿನ ಕನ್ನಡ ಭಾಷೆ, ಸಂಸ್ಕೃತಿ, ಕಲೆಗಳ ಉಳಿವಿಗಾಗಿ ಇತರ ಕನ್ನಡಪರ ಸಂಘ ಸಂಸ್ಥೆಗಳೊಂದಿಗೆ ಸೇರಿ ಶ್ರಮಿಸುತ್ತಿದೆ. ಕನ್ನಡ ಮತ್ತು ಮಲೆಯಾಳ ಪತ್ರಕರ್ತರ ಸ್ನೇಹಸೇತುವಾಗಿ ಈ ಸಂಘವು ಕಾರ್ಯಾಚರಿಸುತ್ತಿದೆ.
ಈ ಸಂಘವು ವಾರ್ಷಿಕವಾಗಿ ದತ್ತಿನಿಧಿ ಪ್ರಶಸ್ತಿಯನ್ನು ಪ್ರಧಾನಿಸುತ್ತಿದ್ದು, ಈ ಬಾರಿಯ ಶ್ರೀ ಜೋಸೆಫ್ ಮಥಾಯಿಸ್ ದುಬೈ ನೀಡುವ ದತ್ತಿನಿಧಿ ಪ್ರಶಸ್ತಿಗೆ ನಾಗರಾಜ್ .ವೈ ಅವರನ್ನು ಆಯ್ಕೆ ಸಮಿತಿಯು ಆರಿಸಿದೆ. ದತ್ತಿನಿಧಿ ಪ್ರಶಸ್ತಿಯು ನಗದು, ಪ್ರಶಸ್ತಿ ಪತ್ರ ಸ್ಮರಣಿಕೆ ಹೊಂದಿರುತ್ತದೆ. 2025 ನೇ ಮೇ 03 ರಂದು ಕಾಸರಗೋಡು ಜಿಲ್ಲೆಯ, ಸೀತಾಂಗೋಳಿ ಎಲೈನ್ಸ್ ಸಭಾಂಗಣದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಕೆ. ಕೆ ಶೆಟ್ಟಿ ಕುತ್ತಿಕಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ,
ಕರ್ನಾಟಕದ ಕೃಷಿ ಸಚಿವ ಚೆಲುವರಾಯ ಸ್ವಾಮಿ, ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ. ಕರ್ನಾಟಕದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ ಪ್ರಭಾಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮುಂತಾದ ಗಣ್ಯರು ಸೇರಿ ಪ್ರಶಸ್ತಿ ಪ್ರಧಾನಿಸುವರು ಎಂದು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.