ಹೊಸಶಕೆ ನ್ಯೂಸ್-ಕೊಪ್ಪಳ:
ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾಕತ್ತಿದ್ದರೆ ದೇಶದಲ್ಲಿ ಎಸ್‌ಸಿಎಸ್‌ಪಿ–ಟಿಎಸ್‌ಪಿ ನಿಧಿ ಕಾಯ್ದೆ ಜಾರಿ ಮಾಡಲಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಲಿತರಿಗೆ ಸೇರಬೇಕಾದ ಹಣ ದುರ್ಬಳಕೆಯಾಗಿದೆ ಎಂದು ವಿ.ಪ. ವಿಪಕ್ಷ ನಾಯಕ ನಾರಾಯಣಸ್ವಾಮಿ ಕೊಪ್ಪಳದ ಜಿಲ್ಲಾಡಳಿತದ ಬಾಗಿಲು ಹಾಕಿ ಹೋರಾಟ ಮಾಡುವುದಕ್ಕಿಂತ ಮೋದಿ ಮನೆಯ ಬಾಗಿಲು ಹಾಕಲಿ ಎಂದರು
ಬಿಜೆಪಿ ನಾಯಕರು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಗುಲಾಮರಂತೆ ನಡೆದು ಕೊಳ್ಳುತ್ತಿದ್ದಾರೆ. ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿಯಿಲ್ಲ; ಅದಕ್ಕಾಗಿ ಗ್ಯಾರಂಟಿ ಯೋಜನೆಗಳ ವಿರೋಧಿಯಾಗಿ ಮಾತನಾಡುತ್ತಿದ್ದಾರೆ, ಗ್ಯಾರಂಟಿ ಬೇಡ ಎಂದು ಛಲವಾದಿ ನಾರಾಯಣಸ್ವಾಮಿ ನೇರವಾಗಿ ಹೇಳಲಿ. ಇದನ್ನು ಬಿಟ್ಟು ಕಾಯ್ದೆ ಬಗ್ಗೆ ಟೀಕಿಸುವುದು ಏಕೆ ಎಂದು ಪ್ರಶ್ನಿಸಿದರು.
ಕೊಪ್ಪಳ ಸಮೀಪ ಬಲ್ಡೋಡಾ ಸಂಸ್ಥೆ ಉಕ್ಕಿನ ಕಾರ್ಖಾನೆ ಸಂಬಂಧಿಸಿದಂತೆ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದಂತೆ ಪಕ್ಷಾತೀತವಾಗಿ ಸರ್ವಪಕ್ಷದ ನಿಯೋಗ ತೆಗೆದುಕೊಂಡು ಹೋಗಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುತ್ತೇವೆ. ಜನರ ಆಶಯಕ್ಕೆ ಬದ್ಧರಿರುವದಾಗಿ ಸ್ಪಷ್ಟಪಡಿಸಿದರು.
ಅಕ್ರಮ ಚಟುವಟಿಕೆಗಳಲ್ಲಿ ನನ್ನ ಸಹೋದರರು ಭಾಗಿಯಾಗಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಆಧಾರರಹಿತ ಆರೋಪ ಮಾಡಿದ್ದಾರೆ. ರೆಡ್ಡಿ ಈ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತಿದೆ ಎಂದು ಶಾಸಕ ಜನಾರ್ದನ ರೆಡ್ಡಿಗೆ ತಿರುಗೇಟು ನೀಡಿದ ಸಚಿವ ತಂಗಡಗಿ ಅವರು, ನಾನು ಬಳ್ಳಾರಿಯಲ್ಲಿ ಸುಂಕಲಮ್ಮ ದೇವಸ್ಥಾನ ಒಡೆದಿಲ್ಲ. ಕರ್ನಾಟಕ–ಆಂಧ್ರ ಗಡಿ ನಾಶ ಮಾಡಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಗಣಿ ಲೂಟಿ ಮಾಡಿದ್ದು ಯಾರು. ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಜೈಲಿಗೆ ಹೋಗಿದ್ದು ಯಾರು? ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಬೇರೆ ಜಿಲ್ಲೆಯಿಂದ ಬಂದು ಇಲ್ಲಿನ ಜನರ ಮನಸ್ಸು ಕೆಡಿಸುವ ಪ್ರಯತ್ನ ಮಾಡುತ್ತಿರುವ ಜನಾರ್ಧನ ರೆಡ್ಡಿ ಎಂದು ದೂರಿದರು.