102 ಬಾರಿ ಸಂವಿಧಾನ ತಿದ್ದುಪಡಿಯಾದರೂ ಪ್ರಾಣವಾಯುಗೆ ಕೈ ಹಾಕಿರಲಿಲ್ಲ. ಈಗ ಸಂವಿಧಾನದ ಕುತ್ತಿಗೆ ಹಿಚುಕಲಾಗುತ್ತಿದೆ: ಕೆವಿಪಿ ಆತಂಕ
*ನಮ್ಮ ಮಕ್ಕಳಿಗೆ ಎಂಥಾ ಭಾರತ ಬೇಕು ಎಂದು ರಾಹುಲ್ ಗಾಂಧಿ ಪ್ರಶ್ನಿಸುತ್ತಿದ್ದಾರೆ: ನಿಮ್ಮ ಉತ್ತರ ಏನು: ಕೆವಿಪಿ ಪ್ರಶ್ನೆ”
ಕೊಪ್ಪಳ ಆ9: ಕಳೆದ 76 ವರ್ಷಗಳಲ್ಲಿ ನಮ್ಮ ಸಂವಿಧಾನಕ್ಕೆ 104 ಬಾರಿ ತಿದ್ದುಪಡಿ ತರಲಾಗಿದೆ. ಆದರೆ ಸಂವಿಧಾನದ ಕುತ್ತಿಗೆಗೇ ಕೈ ಹಾಕುವ ಕೆಲಸ ಮಾತ್ರ ಈಗ ಶುರುವಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಆತಂಕ ವ್ಯಕ್ತಪಡಿಸಿದರು. ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ, ಪತ್ರಕರ್ತರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಿ ಮಾತನಾಡಿದರು.
ಸಂವಿಧಾನ ಪತ್ರಕರ್ತರಿಗೆ ಪ್ರತ್ಯೇಕ ಹಕ್ಕುಗಳನ್ನು ನೀಡಿಲ್ಲ. ಸಂವಿಧಾನದಲ್ಲಿರುವ ವಾಕ್ ಸ್ವಾತಂತ್ರ್ಯವೇ ಪತ್ರಿಕಾ ಸ್ವಾತಂತ್ರ್ಯವೂ ಆಗಿದೆ. ಈಗ ಇದಕ್ಕೇ ಕುತ್ತು ಬಂದಿದೆ ಎಂದರು.ಸ್ವಾತಂತ್ರ್ಯಾನಂತರದ 76 ವರ್ಷಗಳಲ್ಲಿ ನಮ್ಮ ಸಂವಿಧಾನಕ್ಕೆ 104 ಬಾರಿ ತಿದ್ದುಪಡಿ ತರಲಾಗಿದೆ. ಆದರೆ ಈ ಎಲ್ಲಾ ತಿದ್ದುಪಡಿಗಳೂ ಸಂವಿಧಾನದ ಮೂಲ ಆಶಯವನ್ನು ಎತ್ತಿ ಹಿಡಿದಿದ್ದವು.
ಆದರೆ ಇತ್ತೀಚಿನ ಬೆಳವಣಿಗೆಗಳಲ್ಲಿ, ಸಂವಿಧಾನದ ಪರಮಾಧಿಕಾರ, ಸಂಸದೀಯ ಪ್ರಜಾಪ್ರಭುತ್ವ, ಕಲ್ಯಾಣ ರಾಷ್ಟ್ರದ ಪರಿಕಲ್ಪನೆ, ಒಕ್ಕೂಟ ವ್ಯವಸ್ಥೆ, ನಿಯಮಿತ ಕಾಲಕ್ಕೆ ಚುನಾವಣೆ, ಸಾಮಾಜಿಕ ನ್ಯಾಯ, ನೈಸರ್ಗಿಕ ನ್ಯಾಯ, ಮೂಲಭೂತ ಹಕ್ಕುಗಳು, ಧರ್ಮನಿರಪೇಕ್ಷತೆ ಮತ್ತು ಜಾತ್ಯತೀತೆ ಹಾಗೂ ವಾಕ್ ಸ್ವಾತಂತ್ರ್ಯ ನಿರಂತರ ದಾಳಿಗೆ ಒಳಗಾಗುತ್ತಿದೆ. ಈ ಸಂದರ್ಭದಲ್ಲಿ ಹೆಚ್ಚು ಎಚ್ಚರ ವಹಿಸಬೇಕಾದ ಪತ್ರಿಕಾ ವೃತ್ತಿಗೆ ಮೈಮರೆವು ಬಂದಿದೆ. ಇದಕ್ಕೆ ಮೂಲ ಕಾರಣ ಜೀವಂತ ಪತ್ರಿಕಾ ವೃತ್ತಿಯನ್ನು ಕಾರ್ಪೋರೇಟ್ ಶವಪೆಟ್ಟಿಗೆಯೊಳಗಿಟ್ಟು ಒಂದೊಂದೇ ಮೊಳೆ ಹೊಡೆಯಲಾಗುತ್ತಿದೆ ಎಂದರು.ಜನರ ಗಮನವನ್ನು ಅವರ ನಿತ್ಯ ಸಮಸ್ಯೆ ಮತ್ತು ಸವಾಲುಗಳಿಂದ ಬೇರೆಡೆ ಸೆಳೆಯಲು ಕಾರ್ಪೋರೇಟ್ ಶಕ್ತಿಗಳು ಪತ್ರಿಕೋದ್ಯಮವನ್ನು ಬಳಸಿಕೊಳ್ಳುತ್ತಿವೆ. ಪತ್ರಕರ್ತರ ಕೈಯಲ್ಲೇ ಪತ್ರಿಕಾ ವೃತ್ತಿಪರತೆಯ ಶವ ಪೆಟ್ಟಿಗೆಗೆ ಮೊಳೆಯೊಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಕಾರ್ಪೋರೇಟ್ ಜಗತ್ತಿನ ಸಂಗತಿಗಳ ಬಗ್ಗೆ ಹೆಚ್ಚೆಚ್ಚು ನೋಡುವ, ಓದುವ ಜನ ಸಾಮಾನ್ಯರಿಗೆ ತಮ್ಮ ಮೇಲೆ ಬೀಳುತ್ತಿರುವ ತೆರಿಗೆ ಹೊರೆ ಇರಬಹುದು, ತಮ್ಮ ಮಕ್ಕಳ ಭವಿಷ್ಯಕ್ಕೆ ಪ್ರಪಾತಕ್ಕೆ ಬೀಳುತ್ತಿರುವುದರ ಅಪಾಯ ಗಮನಕ್ಕೇ ಬರುತ್ತಿಲ್ಲ ಎಂದು ವಿವರಿಸಿದರು.
ರಾಹುಲ್ ಗಾಂಧಿಯವರು ಕೈಯಲ್ಲಿ ಸಂವಿಧಾನ ಎತ್ತಿ ಹಿಡಿದ ಚಿತ್ರವನ್ನು ಇತ್ತೀಚಿಗೆ ನಾವು, ನೀವೆಲ್ಲಾ ಪದೇ ಪದೇ ಗಮನಿಸುತ್ತಿದ್ದೇವೆ. ರಾಹುಲ್ ಗಾಂಧಿಯವರು ಸಂವಿಧಾನವನ್ನು ಎತ್ತಿ ಹಿಡಿದು ಪತ್ರಕರ್ತರ ಸಮೂಹಕ್ಕೆ ಕೇಳುತ್ತಿರುವುದು ಒಂದೇ ಪ್ರಶ್ನೆ. “ನಮ್ಮ ನಿಮ್ಮ ಮಕ್ಕಳಿಗೆ ಭವಿಷ್ಯದ ಭಾರತ ಹೇಗಿರಬೇಕು ?” ಎನ್ನುವ ರಾಹುಲ್ ಪ್ರಶ್ನೆಯನ್ನು ಪತ್ರಿಕೋದ್ಯಮ ಗಂಭೀರವಾಗಿ ವಿಶ್ಲೇಷಣೆಗೆ ಒಳಪಡಿಸಬೇಕಿದೆ.
ಸಂವಿಧಾನವನ್ನು ಬದಲಾಯಿಸದೇ ಸಂವಿಧಾನದ ಮೂಲ ಆಶಯವನ್ನು , ಮೂಲಭೂತ ತತ್ವಗಳನ್ನು ಕೊಲ್ಲುವ ಷಡ್ಯಂತ್ರದ ವಿರುದ್ಧ ಪತ್ರಿಕೋದ್ಯಮಕ್ಕೆ ಜಾಣ ಮೈಮರೆವು ಬಂದಂತಿದೆ. ಇದರಿಂದ ಪತ್ರಿಕಾ ವೃತ್ತಿಯೇ ಬಿದ್ದು ಹೋಗುತ್ತದೆ ಎಂದರು.
ಪ್ರಸಾರ ಸಂಖ್ಯೆ ಬಿದ್ದೋಗುವುದು, TRP ಬಿದ್ದು ಹೋಗುವುದಕ್ಕಿಂತ ಪತ್ರಿಕೋದ್ಯಮದ ಬಾಯಿ ಬಿದ್ದು ಹೋಗುವುದು ಅತ್ಯಂತ ಅಪಾಯಕಾರಿ ಎಂದರು.
ಸ್ಥಳೀಯ ಶಾಸಕರಾದ ರಾಘವೇಂದ್ರ ಹಿಟ್ನಾಳ್ ಪತ್ರಕರ್ತ ಸ್ನೇಹಿಯಾಗಿದ್ದು ಮೂರು ಶಾಸಕರಾಗಿದ್ದರೂ ಅತ್ಯಂತ ಸರಳತನ ಪಾಲಿಸುವ ಇವರಿಗೆ ಉತ್ತಮ ರಾಜಕೀಯ ಭವಿಷ್ಯವಿದೆ ಎಂದು ನುಡಿದರು.
ಶಿವಾನಂದ ತಗಡೂರು ಅವರು ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಳಿಕ ರಾಜ್ಯಾದ್ಯಂತ ಸಂಘ ಬಹಳ ಕ್ರಿಯಾಶೀಲವಾಗಿದೆ. ಪತ್ರಕರ್ತರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಸಿಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮೀಣ ಪತ್ರಕರ್ತರ ಸಮಸ್ಯೆಗಳಿಗೆ ಸರ್ಕಾರ ಪೂರಕವಾಗಿ ಸ್ಪಂದಿಸುತ್ತಿದೆ. ಬಸ್ ಪಾಸ್ ವಿತರಣೆಗೆ, ಆರೋಗ್ಯ ಸಂಜೀವಿನಿಗೆ, ಮಾಸಾಶನ ಪಡೆಯಲು ಇರುವ ನಿಬಂಧನೆಗಳನ್ನು ಸಡಿಲಗೊಳಿಸಿ, ಸರಳಗೊಳಿಸಲಾಗುವುದು ಎಂದು ಭರವಸೆ ನೀಡಿ, ಪತ್ರಕರ್ತರು ತಮ್ಮ ಹಾಗೂ ಕುಟುಂಬದ ಆರೋಗ್ಯ ಮತ್ತು ಯೋಗಕ್ಷೇಮದ ಕಡೆಗೂ ಗಮನಹರಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಬಾಲಭವನ ಅಧ್ಯಕ್ಷರಾದ ಬಿ.ಆರ್.ನಾಯ್ಡು, ಜೆಡಿಎಸ್ ರಾಜ್ಯ ಕೋರ್ ಕಮೀಟಿ ಸದಸ್ಯ ಸಿ.ವಿ.ಚಂದ್ರಶೇಖರ್, ನಗರಸಭೆ ಅಧ್ಯಕ್ಷ ಅಮ್ಜೆದ್ ಪಟೇಲ್, ಮಾಧ್ಯಮ ಅಕಾಡಮಿ ಸದಸ್ಯ ಕೆ.ನಿಂಗಜ್ಜ, ಜಿಲ್ಲಾ ವಾರ್ತಾಧಿಕಾರಿ ಡಾ.ಜಿ.ಸುರೇಶ್, ಪತ್ರಕರ್ತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಸೇರಿದಂತೆ ಪತ್ರಕರ್ತರ ಸಂಘದ ಜಿಲ್ಲಾ, ತಾಲ್ಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.=ರೋಚಕತೆ ಸುದ್ದಿಯ ವಿಶ್ವಾಸಾರ್ಹತೆ ಕಳೆಯುತ್ತಿದೆ::ಸತ್ಯದಿಂದ ರೋಚಕತೆಗೆ ಪತ್ರಿಕೋದ್ಯಮ ಮರಳಿರುವುದು ಆರೋಗ್ಯಕರ ಅಲ್ಲ. ರೋಚಕತೆ ಸುದ್ದಿಯ ವಿಶ್ವಾಸಾರ್ಹತೆಯನ್ನು ಕಳೆಯುತ್ತಿರುವುದಲ್ಲದೆ ಸಮಾಜದ ನೆಮ್ಮದಿ ಕೆಡಿಸುತ್ತಿದೆ. ಈ ಕಾರಣಕ್ಕೇ ಸರ್ಕಾರ ಸುಳ್ಳು ಸುದ್ದಿಗಳು ಮತ್ತು ಇದರಿಂದ ಸಮಾಜದ ಮೇಲೆ ಆಗುವ ಅನಾಹುತಕಾರಿ ಪರಿಣಾಮಗಳನ್ನು ತಡೆಯಲು ಹೊಸ ಕಾಯ್ದೆಯನ್ನು ಜಾರಿಗೆ ತರುತ್ತಿದೆ: ಕೆ.ವಿ.ಪ್ರಭಾಕರ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು=