ಹೊಸಶಕೆ ನ್ಯೂಸ್-ಕೊಪ್ಪಳ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಲಂಚಗುಳಿತನ, ದುರಾಡಳಿತ ಮತ್ತು ವೈಫಲ್ಯತೆಯಿಂದ ಜನತೆ ಬಸವಳಿದಿದ್ದಾರೆ. ಇನ್ನೂ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಕಾಂಗ್ರೆಸ್ ಸರಕಾರವನ್ನು ಈ ಕೂಡಲೇ ವಜಾಗೊಳಿಸಬೇಕೆಂದು ಜಿಲ್ಲಾ ಜೆಡಿ (ಎಸ್) ನಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಎದುರುಗಡೆ ಪ್ರತಿಭಟನೆ ನಡೆಸಿದ ಜೆಡಿಎಸ್ ಮುಖಂಡರು ರಾಜ್ಯದಲ್ಲಿ ಪೂರ್ವ ಮುಂಗಾರು ಮತ್ತು ಮುಂಗಾರಿನಲ್ಲಿ ಉತ್ತಮ ಮಳೆ ಬಿದ್ದು ರಾಜ್ಯದ ರೈತರು ಕೃಷಿ ಚಟುವಟಿಕೆ ಪ್ರಾರಂಭಿಸಿದ್ದಾರೆ. ಆದರೆ, ಸಕಾಲದಲ್ಲಿ ರೈತರಿಗೆ ರಸಗೊಬ್ಬರ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ, ರಾಜ್ಯಕ್ಕೆ ಕೊರತೆ ಇರುವ ಗೊಬ್ಬರಗಳನ್ನು ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿ ಸಂಪರ್ಕಿಸಿ ಪಡೆಯಲು ಕಾಂಗ್ರೆಸ್ ಸರಕಾರ ವಿಫಲವಾಗಿದೆ,” ಎಂದು ಪಕ್ಷದ ರಾಜ್ಯ ಯುವ ಘಟಕದ ಕಾರ್ಯಾಧ್ಯಕ್ಷ ರಾಜು ನಾಯಕ್ ಆಕ್ರೋಶ ವ್ಯಕ್ತಪಡಿಸಿದರು.

“ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ 6.8 ಲಕ್ಷ ಟನ್ ರಸ ಗೊಬ್ಬರ ನಿಗದಿ ಮಾಡಿದ್ದು, ಈ ಪೈಕಿ ಕೇವಲ 5.27 ಲಕ್ಷ ಟನ್ ರಸ ಗೊಬ್ಬರ ನೀಡಿರುವುದಾಗಿ ರಾಜ್ಯ ಸರ್ಕಾರ ಆಪಾದನೆ ಮಾಡುತ್ತಿದೆ. ಆದರೆ, ಬಾಕಿಯಿರುವ 1.5 ಲಕ್ಷ ಟನ್ ರಸ ಗೊಬ್ಬರವನ್ನು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ ತರುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿ ರಾಜ್ಯದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ,” ಎಂದು ರಾಜ್ಯ ಕಾರ್ಯಕಾರಣಿ ಸದಸ್ಯ ಶರಣಪ್ಪ ಕುಂಬಾರ ಆಕ್ರೋಶ ವ್ಯಕ್ತಪಡಿಸಿದರು.
ಮಳೆ ಮತ್ತು ನೆರೆ ಹಾವಳಿಯಿಂದ ಫಸಲು ನಷ್ಟಕ್ಕೆ ಮತ್ತು ಮಳೆ ಆಭಾವದಿಂದ ಹಾಳಾದ ಬೆಳೆ ನಷ್ಟಕ್ಕೆ ಸಂಬಂಧಿಸಿದ ಫಸಲು ವಿಮಾ ಕಂಪನಿಗಳಿಂದ ರೈತರಿಗೆ ಪರಿಹಾರ ನೀಡಿಲ್ಲ, ಸರ್ಕಾರ ಆಡಳಿತ ನಡೆಸಲು ನೈತಿಕವಾಗಿ ಅಧಿಕಾರ ಕಳೆದುಕೊಂಡಿದೆ. ಈ ಹಿನ್ನಲೆಯಲ್ಲಿ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ರೈತರ ಸಮಸ್ಯೆ ಹಾಗೂ ನೆರೆ ಹಾವಳಿಯಿಂದ ನೊಂದ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕೆಂದು ಪ್ರತಿಭಟನೆ ಮಾಡಿ ಒತ್ತಾಯಿಸಿ ಉಪವಿಭಾಗಾಧಿಕಾರಿ ಮಹೇಶ್ ಪಾಟೀಲ್ ಇವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ಮುಖಂಡರಾದ ಸಂಗಮೇಶ ಡಂಬಾಳ, ಈಶಪ್ಪ ಮಾದನೂರ, ಸಿದ್ದರೆಡ್ಡಿ ಸಿಂದೋಗಿ, ಉಪಾಧ್ಯಕ್ಷರಾದ ಮೂರ್ತ್ಯಪ್ಪ ಹಿಟ್ನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ, ಯಲಬುರ್ಗಾ ತಾಲೂಕು ಅಧ್ಯಕ್ಷರಾದ ಬಸವರಾಜ ಗುಳಗುಳಿ, ಕುಕನೂರ ತಾಲೂಕು ಅಧ್ಯಕ್ಷರಾದ ಕೆಂಚಪ್ಪ, ಜಿಲ್ಲಾ ಸಾಮಾನ್ಯ ವರ್ಗದ ಜಿಲ್ಲಾಧ್ಯಕ್ಷರಾದ ಕರಿಯಪ್ಪ ಹಾಲವರ್ತಿ, ನಗರ ಘಟಕ ಅಧ್ಯಕ್ಷರಾದ ಸೋಮನಗೌಡ ಹೊಗರನಾಳ, ಹಾಗೂ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಮತ್ತು ಮುಖಂಡರಾದ ಪ್ರವೀಣ ಇಟಗಿ, ಸಯ್ಯದ್ ಮೊಹಮ್ಮದ ಹುಸೇನ, ಶಿವಕುಮಾರ್ ಏಣಿಗಿ, ರಮೇಶ ಡoಬ್ರಳ್ಳಿ, ಮಾರುತಿ ಪೇರ್ಮಿ, ಶಾಂತಕುಮಾರ್ ದೊಡ್ಡಮನಿ, ಮೌನೇಶ ಕಿನ್ನಾಳ, ಶರಣಪ್ಪ ಮರ್ಕಟ್, ದ್ಯಾಮಪ್ಪ ಲಮಾಣಿ ಕಲಿಕೇರಿ, ಮಹೇಶ ಕಂದಾರಿ, ರವಿಕುಮಾರ ಮೇದಾರ, ಲೋಕೇಶ ಬಾರಕೆರ, ದೇವರಾಜ ಮಡ್ಡಿ, ಯಮನೂರಪ್ಪ ರಾಥೋಡ, ಹೇಮಣ್ಣ ಕಲಿಕೇರಿ, ಶಂಕ್ರಪ್ಪ ಕಟ್ಟಿಮನಿ, ಪ್ರಜ್ವಲ್ ರೆಡ್ಡಿ, ರಂಗಪ್ಪ ಪೂಜಾರ, ಸೇರಿದಂತೆ ಪಕ್ಷದ ಪ್ರಮುಖರು, ರೈತರು, ಕಾರ್ಯಕರ್ತರು ಉಪಸ್ಥಿತರಿದ್ದರು.