ಹೊಸಶಕೆ ನ್ಯೂಸ್-ಕೊಪ್ಪಳ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಜಿಲ್ಲೆ ಸೇರಿ ರಾಜ್ಯದ್ಯಾಂತ ಸಂಘಟಿತ ಹೋರಾಟ ಮತ್ತು ಜನಾಂದೋಲನವನ್ನು ರೂಪಿಸಲಾಗುವುದು ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಹೇಳಿದರು.
ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಪಕ್ಷದ ಜಿಲ್ಲೆಯ ಪ್ರಮುಖರ ಸಭೆಯಲ್ಲಿ ಸದಸ್ಯತ್ವ ನೋಂದಣಿ, ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಜೋಡಣೆ, ಪಕ್ಷದ ಬಲವರ್ಧನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಅಭಿವೃದ್ಧಿ ಕೆಲಸಗಳು ಸೇರಿ ಜನರ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುತ್ತಿಲ್ಲ, ಕೊಪ್ಪಳ ನಗರ ಸೇರಿ ಜಿಲ್ಲೆಯಲ್ಲಿಯೂ ಸಹ ಸಂಪೂರ್ಣವಾಗಿ ಅಭಿವೃದ್ಧಿ ಕುಂಠಿತಗೊಂಡಿದ್ದು, ಸರ್ಕಾರದ ವಿರುದ್ಧ ಜೆಡಿಎಸ್ ಪಕ್ಷ ಜನಾಂದೋಲನ ಪ್ರಾರಂಭಿಸಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗಲಿದೆ ಎಂದರು.
ವಿವಿಧ ಹೋಬಳಿಗಳಿಗೆ ಭೇಟಿ ನೀಡಿ, ಪಕ್ಷವನ್ನು ಸಂಘಟಿಸಿ ಜಿಲ್ಲೆಯಾದ್ಯಂತ ಜನಾಂದೋಲನ ರೂಪಿಸುತ್ತೇವೆ. ಆ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸಲು ಒತ್ತಡ ತರಬೇಕಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಯಾವ ಕ್ಷಣದಲ್ಲಾದರೂ ನಡೆಯಬಹುದು. ಅದಕ್ಕಾಗಿ ನಾವು ಸಿದ್ಧವಾಗಿರಬೇಕು ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ ಮಾತನಾಡಿ ಸದಸ್ಯತ್ವ ನೋಂದಣಿ ಹಾಗೂ ಚುನಾವಣೆ ಕುರಿತು ಪಕ್ಷ ನೀಡಿರುವ ಜವಾಬ್ದಾರಿಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರದ್ದು, ಈ ನಿಟ್ಟಿನಲ್ಲಿ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಬಲಪಡಿಸಲಾಗುವುದು ಎಂದರು.
ರಾಜ್ಯ ಯುವ ಘಟಕದ ಕಾರ್ಯಧ್ಯಕ್ಷ ರಾಜು ನಾಯಕ, ರಾಜ್ಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ, ಮುಖಂಡರಾದ ಮಂಜುನಾಥ್ ಸೊರಟೂರ, ದೇವಪ್ಪ ಕಟ್ಟಿಮನಿ, ಈಶಪ್ಪ ಮಾದಿನೂರ, ಸಂಗಮೇಶ ಡಂಬಳ, ಮಲ್ಲನಗೌಡ ಕೋಣನಗೌಡ್ರ, ಶರಣಪ್ಪ ಕುಂಬಾರ, ಶರಣಪ್ಪ ಜಡಿ, ಮೂರ್ತೆಪ್ಪ ಗಿಣಿಗೇರ, ಯಮನಪ್ಪ ಕಟಿಗಿ, ದೇವರಾಜ ಮಡ್ಡಿ, ಪ್ರಕಾಶ ಬಸರಿಗಿಡದ ಸೇರಿದಂತೆ ಪಕ್ಷದ ಮುಖಂಡರು, ಪ್ರಮುಖ ಕಾರ್ಯಕರ್ತರು ಇದ್ದರು.
== ಕೊಪ್ಪಳದಲ್ಲಿ ಬಾಣಂತಿಯರ ಸಾವು, ಹದಗೆಟ್ಟ ರಸ್ತೆಗಳು, ದೂಳು ತುಂಬಿದ ವಾತಾವರಣ ಹಾಗೂ ಅಭಿವೃದ್ಧಿಯಲ್ಲಿ ಹಿನ್ನಡೆ ಕುರಿತು ನಿತ್ಯ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ. ದುರಾಡಳಿತ ಹಾಗೂ ಅಭಿವೃದ್ಧಿ ಬಗೆಗಿನ ಸರ್ಕಾರ, ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ನಾವೆಲ್ಲ ಒಗ್ಗಟ್ಟಿನಿಂದ ಹೋರಾಡಬೇಕಿದೆ : ಸಿ.ವಿ. ಚಂದ್ರಶೇಖರ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರು. ಕೊಪ್ಪಳ==