ಹೊಸಶಕೆ ನ್ಯೂಸ್-ಕೊಪ್ಪಳ: ಇತ್ತೀಚೆಗೆ ನಗರದಲ್ಲಿ ಬರ್ಬರ ಹತ್ಯೆಗೆಡಾದ ಯುವಕ ಗವಿಸಿದ್ದಪ್ಪ ನಾಯಕ್ ಅವರ ಮನೆಗೆ ನಾಯಕ ಸಿ ವಿ ಚಂದ್ರಶೇಖರ್ ಅವರು ಗುರುವಾರ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಕೊಲೆ ಪ್ರಕರಣದ ಎಲ್ಲಾ ಆಯಾಮಗಳ ತನಿಖೆಯನ್ನು ಪೊಲೀಸ್ ಇಲಾಖೆ ನಡೆಸಬೇಕು ಹಾಗೂ ತಪ್ಪಿಸ್ತಸ್ಥರಿಗೆ ಕಾನೂನು ಪ್ರಕಾರ ಸೂಕ್ತ ಶಿಕ್ಷೆ ನೀಡುವ ಕೆಲಸ ಮಾಡಬೇಕು ಎಂದರು.
ಪ್ರಾಥಮಿಕ ತನಿಖೆಯ ಪ್ರಕಾರ ವೈಯಕ್ತಿಕ ಕಾರಣಗಳಿಗಾಗಿ ಈ ಕೊಲೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಆದರೆ ಆ ಕೊಲೆ ಹಿಂದೆ ಬೇರೆ ಕಾರಣಗಳು ಇರಬಹುದು ಎಂದು ಕುಟುಂಬದ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹತ್ತಾರು ಜನ ಓಡಾಡುವ ಸ್ಥಳದಲ್ಲಿಯೇ ಕೊಲೆಯಾಗಿರುವುದು ಶಂಕೆಗೆ ಆಸ್ಪದ ಕೊಡುತ್ತದೆ. ಕೊಲೆಯಾದ ರೀತಿಯನ್ನು ನೋಡಿದರೆ ಆರೋಪಿತರ ಮನಸ್ಥಿತಿಯ ಬಗ್ಗೆ ಹೆದರಿಕೆ ಹುಟ್ಟುತ್ತದೆ. ಅವರಿಗೆ ಕಾಣದ ಕೈಗಳ ಅಭಯ ಇರಬಹುದು ಎಂಬ ಅನುಮಾನ ಹುಟ್ಟುತ್ತದೆ. ಹೀಗಾಗಿ ಈ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಲು ಒತ್ತಾಯಿಸಿದ್ದಾರೆ.
ಲಭ್ಯ ಇರುವ ಎಲ್ಲ ಸಾಕ್ಷಿಗಳನ್ನು ಉಪಯೋಗಿಸಿಕೊಂಡು ನ್ಯಾಯಾಲಯದ ಮುಂದೆ ಸಲ್ಲಿಸಬೇಕು. ಭೀಕರ ಹತ್ಯೆಗೆ ಉಗ್ರವಾದ ಶಿಕ್ಷೆ ನ್ಯಾಯಾಲಯ ಕೊಡುವಂತೆ ಪ್ರಕರಣವನ್ನು ನಿಭಾಯಿಸಬೇಕು. ಕೊಪ್ಪಳ ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾಗಿದೆ. ನಾಯಕ್ ಹಾಗೂ ಆರೋಪಿಗಳ ಕುಟುಂಬದವರು ಅತ್ಯಂತ ಸಯಮ ಹಾಗೂ ಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇಲ್ಲಸಲ್ಲದ ಗಾಳಿ ಮಾತುಗಳನ್ನು ಹರಡುವವರ ಮೇಲೆ ನಿಗಾ ಇಡುವುದು ಪೊಲೀಸರ ಜವಾಬ್ದಾರಿಯಾಗಿದೆ, ನಮ್ಮ ಪಕ್ಷ ಗವಿಸಿದ್ದಪ್ಪ ಕುಟುಂಬದ ಪರವಾಗಿದೆ. ಮೃತರ ಕುಟುಂಬಕ್ಕೆ ನ್ಯಾಯ ಸಿಗುವ ತನಕ ನಾವು ಹೋರಾಡಲಿದ್ದೇವೆ ಎಂದರು.