ಹೊಸಶಕೆ ನ್ಯೂಸ್-ಗಂಗಾವತಿ: ಮಕ್ಕಳ ಹಕ್ಕುಗಳ ರಕ್ಷಣೆ, ಪಾಲನೆ ಮತ್ತು ಕಾನೂನಿನ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದು ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ ಸಲಹೆ ನೀಡಿದರು.
‘ತೆರೆದ ಮನೆ’ ಕಾರ್ಯಕ್ರಮ ಜಿಲ್ಲೆಯಾದ್ಯಂತ ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸ್ಥಳೀಯ ಮಟ್ಟದಲ್ಲಿ ಎರಡು ಅಥವಾ ಮೂರು ಶಾಲೆಯ ಮಕ್ಕಳನ್ನು ಒಂದೆಡೆ ಸೇರಿಸಿ ಮಕ್ಕಳ ಸಹಾಯವಾಣಿ, ಪೊಕ್ಸೊ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಮತ್ತಿತರ ವಿಷಯಗಳ ಬಗ್ಗೆ ತಿಳಿಸಬೇಕು ಎಂದರು.
ಕಾಯ್ದೆಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರೆ ಅವರಿಗೆ ತಮ್ಮ ಮೇಲಾಗುವ ಅನ್ಯಾಯಗಳ ಬಗ್ಗೆ ತಿಳಿವಳಿಕೆ ಬರುತ್ತದೆ. ಪೋಲಿಸ್ ವ್ಯವಸ್ಥೆಯನ್ನು ಸದ್ಭಳಕೆ ಮಾಡಿಕೊಳ್ಳಲು ಧೈರ್ಯ ಮೂಡುತ್ತದೆ. ಪೋಲಿಸ್ ಇಲಾಖೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದರು.
ಜಿಲ್ಲೆಯಲ್ಲಿ ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪ್ರಕರಣಗಳು ಕಡಿಮೆ ಆಗಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ಮರು ದಾಖಲಿಸಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ಪೌಷ್ಟಿಕ ಆಹಾರ ನೀಡಬೇಕು ಎಂದು ಹೇಳಿದರು. ಸಂದರ್ಭದಲ್ಲಿ ಶಿಕ್ಷಕರಾದ ಜಿ.ಶ್ರೀದೇವಿ ಕೃಷ್ಣಪ್ಪ, ಮಂಜುನಾಥ ಎಲ್, ಸುಜಾತಾ ಸರ್ಜಾಪುರ, ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು