ಹೊಸಶಕೆ ನ್ಯೂಸ್-ಕೊಪ್ಪಳ : ಮೊದಲ ಹಂತದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್ 1 ರಿಂದ ಮಾ.20 ರವರೆಗೆ ನಡೆಯಲಿವೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ದ್ವಿತೀಯ ಪಿಯುಸಿ ಮೊದಲ ಹಂತದ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳು ಕೊಪ್ಪಳ ಜಿಲ್ಲೆಯ ಒಟ್ಟು 24 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ಒಟ್ಟು 16,256 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ
ಈ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳ ಸಾಗಾಣಿಕೆಗಾಗಿ ತ್ರೀಸದಸ್ಯ ಸಮಿತಿ ರಚಿಸಿದ್ದು, ಪರೀಕ್ಷೆಗಳು ಸುಗಮವಾಗಿ ನಡೆಸುವ ಹಿತದೃಷ್ಠಿಯಿಂದ ಒಟ್ಟು 24 ಪರೀಕ್ಷಾ ಕೇಂದ್ರಗಳಿಗೆ ಸಿಸಿ ಟಿವಿ ಹಾಗೂ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿನ ದೃಶ್ಯಗಳನ್ನು ವೆಬ್ ಕಾಸ್ಟಿಂಗ್ ಮೂಲಕ ವೀಕ್ಷಿಸಲು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಲು ಜೆರಾಕ್ಸ್ ಮತ್ತು ಕಂಪ್ಯೂಟರ್ ಸೈಬರ್ ಅಂಗಡಿಗಳನ್ನು ಮುಚ್ಚುವುದು ಸೂಕ್ತವೆಂದು ಮನಗಂಡು ಸಿ.ಆರ್.ಪಿ.ಸಿ ಕಾಯ್ದೆ 2023 ರ ಕಲಂ 163 ರನ್ವಯ ನಿಷೇಧಾಜ್ಞೆಯನ್ನ ಜಾರಿಗೊಳಿಸಲಾಗಿದೆ ಎಂದರು.
ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೇಂದ್ರಗಳ ತಾಲ್ಲೂಕವಾರು ವಿವರ:
ಕೊಪ್ಪಳ ತಾಲೂಕಿನಲ್ಲಿ 6 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 4925 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು. ಗಂಗಾವತಿ ತಾಲ್ಲೂಕಿನಲ್ಲಿ 9 ಪರೀಕ್ಷಾ ಕೇಂದ್ರಗಳಲ್ಲಿ 5416 ವಿದ್ಯಾರ್ಥಿಗಳು, ಕುಷ್ಟಗಿ ತಾಲ್ಲೂಕಿನಲ್ಲಿ 4 ಪರೀಕ್ಷಾ ಕೇಂದ್ರಗಳಲ್ಲಿ 2388 ವಿದ್ಯಾರ್ಥಿಗಳು, ಯಲಬುರ್ಗಾ ತಾಲ್ಲೂಕಿನಲ್ಲಿ 2 ಪರೀಕ್ಷಾ ಕೇಂದ್ರಗಳಲ್ಲಿ 1046 ವಿದ್ಯಾರ್ಥಿಗಳು, ಕುಕನುರು ತಾಲ್ಲೂಕಿನಲ್ಲಿ 1 ಪರೀಕ್ಷಾ ಕೇಂದ್ರದಲ್ಲಿ 1026 ವಿದ್ಯಾರ್ಥಿಗಳು, ಕಾರಟಗಿ ತಾಲ್ಲೂಕಿನಲ್ಲಿ 1 ಪರೀಕ್ಷಾ ಕೇಂದ್ರದಲ್ಲಿ 757 ವಿದ್ಯಾರ್ಥಿಗಳು, ಕನಕಗಿರಿ ತಾಲ್ಲೂಕಿನಲ್ಲಿ 1 ಪರೀಕ್ಷಾ ಕೇಂದ್ರದಲ್ಲಿ 698 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ.