ಹೊಸಶಕೆ ನ್ಯೂಸ್-ಕೊಪ್ಪಳ: ಕೊಪ್ಪಳ ಸಮೀಪದಲ್ಲಿ ಬಲ್ಡೋಟಾ ಸಂಸ್ಥೆ ಉಕ್ಕಿನ ಕಾರ್ಖಾನೆಯನ್ನು ವಿಸ್ತರಣೆ ಮಾಡಲು ಮುಂದಾಗಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಆದರೆ ಸರ್ಕಾರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಬಲ್ಡೋಟಾ ಸಂಸ್ಥೆಯ ಬಿಎಸ್ಪಿಎಲ್ ಸೇರಿ ಮೂರು ಕಂಪನಿಗಳೊಂದಿಗೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರು ಪರಿಷತ್‌ನಲ್ಲಿ ಕೊಪ್ಪಳ ಬಳಿ ಸ್ಥಾಪಿತವಾಗುತ್ತಿರುವ ಕಾರ್ಖಾನೆಗಳ ಸಂಬಂಧ ಕೇಳಿದ ಪ್ರಶ್ನೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ನೀಡಿರುವ ಲಿಖಿತ ಉತ್ತರದಲ್ಲಿ ಈ ಅಂಶ ಬಯಲಿಗೆ ಬಂದಿದ್ದು, ಕೊಪ್ಪಳ ಸೇರಿ ಸುತ್ತಲಿನ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿರುವರು.
ಪ್ರಸ್ತುತ ಚಾಲನೆಯಲ್ಲಿರುವ ಕಾರ್ಖಾನೆಗಳಿಂದ ಈಗಾಗಲೇ ಸಾಕಷ್ಟು ದೂಳು ಬರುತ್ತಿದೆ. ಈ ವಿಷಯ ಸರ್ಕಾರದ ಗಮನಕ್ಕೆ ಇದೆಯೇ? ಆದರೂ ಕೈಗಾರಿಕೆಗಳ ವಿಸ್ತರಣೆಗೆ ಅವಕಾಶ ನೀಡಲು ಕಾರಣವೇನು ಎನ್ನುವ ಹೇಮಲತಾ ನಾಯಕ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ತಂಡ ಕೈಗಾರಿಕೆಗಳನ್ನು ವೀಕ್ಷಣೆ ಮಾಡಿದ್ದು, ಈ ತಂಡದ ವರದಿಯನ್ನಾಧರಿಸಿ ಕ್ರಮಜರುಗಿಸಲಾಗುವುದು ಎಂದಿದ್ದಾರೆ.
ಬಲ್ಡೋಟಾ ಗ್ರೂಪ್ ಸಂಸ್ಥೆಯ ಎಂಎಸ್‌ಪಿಎಲ್ ಕೈಗಾರಿಕೆ ಓಳಗೊಂಡಂತೆ ಇತರೆ ಕೈಗಾರಿಕೆಗಳಿಂದ ಮಾಲಿನ್ಯವಾಗುತ್ತಿರುವ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಕಾರ್ಖಾನೆಗಳಿಂದ ಮಾಲಿನ್ಯ ಅನುಪಾಲನಾ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ. ಇನ್ನು ಬಲ್ಡೋಟಾ ಕಂಪನಿ ವಿಸ್ತರಣೆಗೆ ಸ್ಥಳೀಯವಾಗಿ ವಿರೋಧ ವ್ಯಕ್ತವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಈ ಬಗ್ಗೆ ಪರಿಶೀಲಿಸುವ ಬಗ್ಗೆ ಲಿಖಿತ ಉತ್ತರದಲ್ಲಿ ತಿಳಿಸಲಾಗಿದೆ.== ಬಲ್ಡೋಟಾ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಕಂಪನಿ ಜೊತೆ ಸರ್ಕಾರ ₹54 ಸಾವಿರ ಕೋಟಿ, ಕಿರ್ಲೋಸ್ಕರ್ ಫೆರಸ್ ಲಿಮಿಟೆಡ್ ಜೊತೆ ₹3 ಸಾವಿರ ಕೋಟಿ ಹೂಡಿಕೆಗೆ ಹಾಗೂ ಸೆರೆನಾಟಿಕಾ ರಿನಿವಬಲ್ಸ್ ಇಂಡಿಯಾ ಪ್ರವೈಟ್ ಲಿಮಿಟೆಡ್ ಜೊತೆ ₹43,975 ಕೋಟಿಗಳಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿರುವುದು. ಈ ಬಗ್ಗೆ ಇತ್ತೀಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಮೂರು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ ಬಲ್ಡೋಟಾ ಕಂಪನಿ ಜೊತೆ ಎಂಒಯು ಆಗಿದೆ==