ಹೊಸಶಕೆ ನ್ಯೂಸ್ -ಕೊಪ್ಪಳ :
ಜಿಲ್ಲೆಯ ಪ್ರವಾಸಿ ತಾಣಗಳ ಬೇಟಿ ನೀಡುವ ಪ್ರವಾಸಿಗರಿಗೆ ಮಾಹಿತಿ, ಸುರಕ್ಷತೆ ಹಾಗೂ ಭದ್ರತೆ ಹಿತದೃಷ್ಟಿಯಿಂದ ಪ್ರವಾಸಿ ಮಾಹಿತಿ ಕೇಂದ್ರ (Information Center) ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ತಿಳಿಸಿದ್ದಾರೆ.
ಜಿಲ್ಲೆಯು ಐತಿಹಾಸಿಕ ಪ್ರೇಕ್ಷಣಿಯ ಸ್ಥಳಗಳನ್ನು ಹೊಂದಿರುವ ಜಿಲ್ಲೆಯಾಗಿದ್ದು, ದೇಶ ಹಾಗೂ ವಿದೇಶದಿಂದ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಈ ಪ್ರವಾಸಕ್ಕೆ ಆಗಮಿಸುವ ಪ್ರವಾಸಿಗರಿಗೆ ಮಾಹಿತಿ, ಸುರಕ್ಷತೆ, ಜಾಗೃತಿ ಕಲ್ಪಿಸುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಒಂದು ಪ್ರವಾಸಿ ಮಾಹಿತಿ ಕೇಂದ್ರವನ್ನು (ಸಹಾಯವಾಣಿ) ಮಾರ್ಚ್ 11 ರಿಂದ ಆರಂಭಿಸಲಾಗಿದೆ. ಈ ಮಾಹಿತಿ ಕೇಂದ್ರದಲ್ಲಿ ಆರೋಗ್ಯ, ಪೊಲೀಸ್, ಅಗ್ನಿಶಾಮಕ, ಅರಣ್ಯ, ಅಬಕಾರಿ, ಪ್ರವಾಸೋದ್ಯಮ, ಪುರಾತತ್ವ ಇಲಾಖೆಯ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿರುತ್ತದೆ.
ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಆರೋಗ್ಯ, ಪ್ರವಾಸಿ ತಾಣ, ಅಪರಾದ, ವಿಪತ್ತುಗಳಂತಹ ಇತರ ಅವಶ್ಯಕ ಮತ್ತು ತುರ್ತು ಸಂದರ್ಭದಲ್ಲಿ ನಿಖರವಾದ ಮತ್ತು ಸೂಕ್ತ ಮಾಹಿತಿಯನ್ನು ಒದಗಿಸುವ ಹಿತದೃಷ್ಟಿಯಿಂದ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ.
ಈ ಅಧಿಕಾರಿ/ಸಿಬ್ಬಂದಿ ವರ್ಗದವರು ಪ್ರತಿದಿನ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಸಹಾಯವಾಣಿ ಕೇಂದ್ರದಲ್ಲಿ ಕರ್ತವ್ಯವನ್ನು ನಿರ್ವಹಿಸಲಿದ್ದು, ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ತಮಗೆ ಬೇಕಾದ ಅಗತ್ಯ ಸಲಹೆ ಹಾಗೂ ಮಾಹಿತಿಯನ್ನು ಪಡೆಯಲು ಈ ಸಹಾಯವಾಣಿ ಸಂಖ್ಯೆ : 08539-225311 ಗೆ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.