ಹೊಸಶಕೆ ನ್ಯೂಸ್-ಕುಷ್ಟಗಿ: ಪಟ್ಟಣದಲ್ಲಿ ಪ್ರಥಮ ಬಾರಿಗೆ ಸಿವಿಸಿ ಫೌಂಡೇಶನ್ ವತಿಯಿಂದ 150ಕ್ಕೂ ಹೆಚ್ಚು ದೇಸಿ ಭತ್ತದ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನ. 26 ಮತ್ತು 27ರಂದು ಎಸ್ ವಿ ಸಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಲಿದೆ.
ಎಸ್ ವಿ ಸಿ ಶಾಲೆಗಳು ಆಯೋಜಿಸಿರುವ ಎರಡು ದಿನಗಳ ವಿಜ್ಞಾನ ವಸ್ತು ಪ್ರದರ್ಶನ ‘ಗ್ರಾವಿಟಿ 2025 -26’ ಅಂಗವಾಗಿ ಭತ್ತದ ತಳಿಗಳ ಪ್ರದರ್ಶನ ಹಾಗೂ ಮಾರಾಟ ಆಯೋಜನೆಗೊಂಡಿದೆ. ಸುಮಾರು 260 ದೇಸಿ ಭತ್ತದ ತಳಿಗಳ ಸಂರಕ್ಷಕ ಬೆಳಗಾವಿ ಜಿಲ್ಲೆಯ ಖಾನಾಪುರದ ರೈತ ಡಾ. ಶಂಕರ್ ಲಂಗಟಿ ಅವರಿಂದ ದೇಸಿ ಭತ್ತ, ಸಿರಿಧಾನ್ಯ, ತರಕಾರಿ ಬೀಜ ಹಾಗೂ ನೈಸರ್ಗಿಕ ಬೆಲ್ಲದ ಪ್ರದರ್ಶನ, ಮಾರಾಟ ಹಾಗೂ ಅವುಗಳ ಕೃಷಿ ಕುರಿತು ಸಂವಾದ ಏರ್ಪಡಿಸಲಾಗಿದೆ.
ಬೆಂಗಳೂರಿನ ವಿಜ್ಞಾನಿ ಡಾ. ಆರ್ ಸಿ ಹಿರೇಮಠ್ ವಸ್ತು ಉದ್ಘಾಟಿಸಲಿದ್ದಾರೆ. ಸಾವಯವ ಕೃಷಿಕ ಶ್ರೀಪಾದರಾಜ ಮರಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಎಸ್ ವಿ ಸಿ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸಿ ವಿ ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಎಸ್ ವಿ ಸಿ ಸಂಸ್ಥೆಯ ಎರಡು ಶಾಲೆಗಳ ಮಕ್ಕಳು ಒಟ್ಟು 586 ಮಾದರಿಗಳನ್ನು ಪ್ರದರ್ಶಿಸಲಿದ್ದಾರೆ. ಬೆಳಿಗ್ಗೆ 9:00ಯಿಂದ ಸಂಜೆ ಐದರ ತನಕ ವಸ್ತು ಪ್ರದರ್ಶನಕ್ಕೆ ಭೇಟಿ ಕೊಡಬಹುದು. ಸಾವಯುವ ಹಾಗೂ ದೇಸಿ ಭತ್ತದ ಕೃಷಿ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಆಸಕ್ತರು ಮತ್ತು ರೈತರು ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.
