ಹೊಸಶಕೆ ನ್ಯೂಸ್-ಕೊಪ್ಪಳ: ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಕಲಿಸಿದಾಗ ಮಾತ್ರ ಅದು ಮಕ್ಕಳ ಸಮಗ್ರವಾದ ಕಲಿಕೆಯಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಗಂಗಪ್ಪ ಹೇಳಿದರು.
ನಗರದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಬೆಂಗಳೂರು ರಾಜ್ಯ ಬಾಲ ಭವನ ಸೊಸೈಟಿ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಬಾಲ ಭವನ ಸಮಿತಿ ಇವರ ಸಹಯೋಗದಲ್ಲಿ ನಡೆದ 2025-26ನೇ ಸಾಲಿನ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ 15 ದಿನಗಳ ಕಾಲ ಚಿತ್ರಕಲೆ, ಜೇಡಿಮಣ್ಣಿನ ಕಲೆ, ಕರಕುಶಲ, ಕರಾಟೆ, ಯೋಗ, ಸಮೂಹ ಸಂಗೀತ ಮತ್ತು ಸಮೂಹ ನೃತ್ಯ ಇಂತಹ ಹಲವಾರು ವಿವಿಧ ಚಟುವಟಿಕೆಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಿದ್ದು, ಇಂದು ಆ ಎಲ್ಲಾ ಕಲೆಗಳ ಪ್ರದರ್ಶನ ದಿನವಾಗಿದೆ. ನಂತರ ಮಕ್ಕಳು 15 ದಿನಗಳಲ್ಲಿ ಉತ್ತಮ ರೀತಿಯಲ್ಲಿ ಕಲಿತುಕೊಂಡಿರುವುದು ನಮ್ಮೆಲ್ಲರಿಗೂ ಸಂತೋಷದ ವಿಷಯವೆಂದು ತಿಳಿಸಿದರು.
ಯುನಿಸೆಫ್ ಸಂಯೋಜಕರಾದ ಹರೀಶ ಜೋಗಿ ಮಾತನಾಡಿ, ಮಕ್ಕಳಿಗೆ ಈ ಬೇಸಿಗೆ ಶಿಬಿರದಲ್ಲಿ ಕಲಿಸಿದ ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ತಂದೆ ತಾಯಿಗಳಿಗೆ ಚಪ್ಪಾಳೆ ಮೂಲಕ ಅಭಿನಂದನೆ ಸಲ್ಲಿಸಲು ತಿಳಿಸಿದರು. ಹಾಗೂ ಈ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಆಯೋಜನೆ ಮಾಡಿ ಮಕ್ಕಳಿಗೆ ಉತ್ತಮ ಅವಕಾಶ ಕಲ್ಪಿಸಿ ಕೊಟ್ಟಿರುವ ಬೆಂಗಳೂರು ರಾಜ್ಯ ಬಾಲ ಭವನ ಸೊಸೈಟಿಗೆ ಹಾಗೂ ಇಲಾಖೆಯ ಸಿಬ್ಬಂದಿಗಳಿಗೆ ಧನ್ಯವಾದಗಳನ್ನ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೊಟಗಾರ, ಜಯಶ್ರೀ ಆರ್, ವಿಷಯ ಪರೀಕ್ಷಕರಾದ ವೀಣಾ , ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ದಿವ್ಯಜೋತಿ, ಮಂಗಳ, ಯಮನೂರಪ್ಪ, ಸಿದ್ದಪ್ಪ ಕುರಿ , ಮೆಹಬೂಬಸಾಬ ಇಲಾಹಿ, ಪ್ರಮೋದ್ ಕುಮಾರ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು, ವಿವಿಧ ಶಾಲೆಯ ಮಕ್ಕಳು, ಸರಕಾರಿ ಬಾಲಕರ ಬಾಲಮಂದಿರ, ಸರಕಾರಿ ಬಾಲಕಿಯರ ಬಾಲ ಮಂದಿರದ ಮಕ್ಕಳು ಪಾಲಕರು ಪೋಷಕರು ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.