ಹೊಸಶಕೆ ನ್ಯೂಸ್ -ಕೊಪ್ಪಳ: ರಾಜ್ಯದ ಪ್ರತಿ ಊರು ಕೇರಿ, ಹಾಡಿ, ಮೊಹಲ್ಲಾಗಳಲ್ಲಿ ಸಂವಿಧಾನ ಸಂರಕ್ಷಣಾ ಪಡೆ ಕಟ್ಟುವ ಮಹಾಯಾನಕ್ಕೆ ಚಾಲನೆ ನೀಡಲು ಏ.26 ರಂದು ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನ ಸಂರಕ್ಷಕರ ಸಮಾವೇಶದ ಜಿಲ್ಲಾ ಮುಖಂಡರಾದ ಅಲ್ಲಮಪ್ರಭು ಬೆಟ್ಟದೂರ ಹೇಳಿದರು.
ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರವು ಕಾರ್ಪೋರೇಟ್ ಹಾಗೂ ಮನುವಾದಿ ಶಕ್ತಿಗಳ ರೀತಿ ಕೆಲಸ ಮಾಡುತ್ತಿದೆ. ನೂರು ವರ್ಷಗಳ ಹಿಂದೆ ಜರ್ಮನಿಯನ್ನು ಹಾಗೂ ಜಗತ್ತನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಫ್ಯಾಸಿಟ್ ಹಿಟ್ಲರ್ ಬಳಸಿದ ತಂತ್ರಗಾರಿಕೆಯನ್ನು ಈಗ ಭಾರತದಲ್ಲಿ ಪ್ರಯೋಗಿಸಲಾಗುತ್ತಿದೆ, ವಿವಿಧ ಜನ ವರ್ಗಗಳಿಗೆ ಸಂವಿಧಾನ ಕೊಟ್ಟಿದ್ದ ಹಕ್ಕುಗಳಿಗೆ ತದ್ವಿರುದ್ಧ ದಿಕ್ಕಿನಲ್ಲಿ ಕಾನೂನುಗಳನ್ನು ರೂಪಿಸಿ ತನ್ನ ಕಾರ್ಪೋರೇಟ್ ಬಳಗವನ್ನು ಬೆಳೆಸಲಾಗುತ್ತಿದೆ ಎಂದರು.
ನಾಗರೀಕ ಮಟ್ಟದಿಂದ ದೇಶ ಮಟ್ಟದ ತನಕ ನಮ್ಮನ್ನು ನಾವು ಕಟ್ಟಿಕೊಳ್ಳಬೇಕಿದೆ, ಈ ಗುರಿಯೊಂದಿಗೆಯೇ ಪ್ರತಿ ಊರು, ಕೇರಿ, ಹಾಡಿ, ಬೀದಿಗಳಲ್ಲಿ, “ಸಂವಿಧಾನ ಸಂರಕ್ಷಕ ಪಡೆ” ಹೆಸರಿನಲ್ಲಿ ದೇಶಪ್ರೇಮಿ ತಂಡಗಳನ್ನು ಕಟ್ಟುವ ಪ್ರಕ್ರಿಯೆಗೆ ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನ ಆವರಣದ ಹೈಸ್ಕೂಲ್ ಫೀಲ್ಡ್ ಬಳಿ ಸಂವಿಧಾನ ಸಂರಕ್ಷಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ, ಮುಂದಿನ ಮೂರು ವರ್ಷಗಳಲ್ಲಿ ಒಂದು ಲಕ್ಷ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶದ ಜಿಲ್ಲಾ ಸಂಯೋಜಕರಾದ ಮುದುಕಪ್ಪ ಹೊಸಮನಿ, ದುರ್ಗೇಶ್ ಬರಗೂರು, ರಾಜು ನಾಯಕ್, ಸಿರಾಜ್ ಸಿದ್ದಾಪುರ, ಚನ್ನಬಸಪ್ಪ ಗಾಳೆಪ್ಪ ಮುಂಗೋಲಿ ಇತರರು ಇದ್ದರು.