ಹೊಸಶಕೆ ನ್ಯೂಸ್-ಕೊಪ್ಪಳ: ಜಿಲ್ಲೆಯ ಕುಕನೂರು ತಾಲ್ಲೂಕಿನ ಗ್ರಾಮವೊಂದರ ಡಿ. ದೇವರಾಜ ಅರಸ್ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಹತ್ತನೇ ತರಗತಿ ಓದುತ್ತಿದ್ದ ಬಾಲಕಿ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆಗೆ ಸಂಬಂಧಿಸಿದಂತೆ ಬಾಲಕಿ ಗರ್ಭಿಣಿಯಾಗಲು ಕಾರಣವಾದ ಆರೋಪದ ಮೇಲೆ ಯಲಬುರ್ಗಾ ತಾಲ್ಲೂಕಿನ ತಲ್ಲೂರು ಗ್ರಾಮದ ಯುವಕ ಹನುಮನಗೌಡ ಬತ್ತಿ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನೂ ಆರೋಪಿ ಹನುಮನಗೌಡ, ಶಶಿಕಲಾ, ಶಿಕ್ಷಕರಾದ ಪ್ರಭಾಕರ ಭಜಂತ್ರಿ, ಯಂಕಪ್ಪ ಪೂಜಾರ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಕುಕನೂರು ತಂಡದ ವೈದ್ಯಾಧಿಕಾರಿಗಳಾದ ಭರತೇಶ ಹಿರೇಮಠ ಹಾಗೂ ಸಬೀಯಾ ಅವರ ಮೇಲೆ ಕುಕನೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಬಾಲಕಿ ರಕ್ಷಣೆಗೆ ನಿಗಾವಹಿಸದ ಹಾಸ್ಟೆಲ್ ಮೇಲ್ವಿಚಾರಕಿ ಶಶಿಕಲಾ ಹಿರೇಮಠ, ಅಡುಗೆ ಕೆಲಸಗಾರರಾಗಿದ್ದ ಪಾರ್ವತಿ ಕುದಿರಿಮೋತಿ ಹಾಗೂ ಪ್ರಿಯಾಂಕಾ ಸಿಂಧೋಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ. ವಸತಿ ನಿಲಯಗಳ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಲು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಈಗ ಪ್ರಸವವಾಗಿರುವ ಬಾಲಕಿ ಆರೋಗ್ಯ ತಪಾಸಣೆಯನ್ನು 2 ತಿಂಗಳ ಹಿಂದೆ ಮಾಡಲಾಗಿದ್ದು, ಬಾಲಕಿ ಗರ್ಭಿಣಿ ಆಗಿರುವುದನ್ನು ವೈದ್ಯಾಧಿಕಾರಿಗಳು ಪತ್ತೆ ಹಚ್ಚಿಲ್ಲ. ಆದ್ದರಿಂದ, ಕರ್ತವ್ಯ ಲೋಪದ ಮೇಲೆ ಇಬ್ಬರು ವೈದ್ಯಾಧಿಕಾರಿಗಳ ಮೇಲೂ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
== ಆರೋಪಿ ಹನುಮನಗೌಡ ನನ್ನನ್ನು ಪ್ರೀತಿಸುತ್ತಿದ್ದ. ಮದುವೆ ಆಗುವುದಾಗಿ ಹೇಳಿ ಶಾಲೆ ಬಿಟ್ಟ ನಂತರ ಹಲವು ಬಾರಿ ಲೈಂಗಿಕ ಸಂಪರ್ಕ ಮಾಡಿದ್ದಾನೆ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ. ಬುಧವಾರ ಬೆಳಿಗ್ಗೆ ಬಾಲಕಿಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಶೌಚಾಲಯಕ್ಕೆ ತೆರಳಿದಾಗ ಅಲ್ಲಿಯೇ ಹೆರಿಗೆಯಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ನೀಡುರವ ದೂರಿನ ಮೇರೆಗೆ ಕುಕನೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.==
