ಹೊಸಶಕೆ ನ್ಯೂಸ್ -ಗಂಗವಾತಿ: ತಾಲೂಕಿನ ಸಣಾಪುರದ ಬಳಿ ನಡೆದಿದ್ದ ಇಬ್ಬರು ಮಹಿಳೆಯರ (ಇಸ್ರೇಲ್ ದೇಶದ ಒಬ್ಬರು, ಸ್ಥಳೀಯ ಒಬ್ಬರು) ಅತ್ಯಾಚಾರ ಹಾಗೂ ಒಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಬಂಧಿಸಿದ್ದು, ಇನ್ನೊಬ್ಬ ಆರೋಪಿತನ ಹುಡುಕಾಟ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್. ಎಲ್ ಅರಸಿದ್ಧಿ ತಿಳಿಸಿದ್ದಾರೆ.
ಶನಿವಾರ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಸಾಯಿನಗರದ ಗೌಂಡಿ ಕೆಲಸ ಮಾಡುವ ಮಲ್ಲೇಶ ಅಲಿಯಾಸ್ ಹಂದಿ ಮಲ್ಲೇಶ ಅಯ್ಯಪ್ಪ ದಾಸರ (22) ಹಾಗೂ ಮಿಷನ್ ಕೆಲಸ ಮಾಡುವ ಚೇತನಸಾಯಿ ಕಾಮೇಶ್ವರ ರಾವ್ (21) ಎಂಬ ಇಬ್ಬರು ಯುವಕರನ್ನು ಬಂಧಿಸಲಾಗಿದೆ ಎಂದರು.
ಇನ್ನೊಬ್ಬ ಯುವಕ ತಲೆಮರೆಸಿಕೊಂಡಿದ್ದು, ಆತನ ಸುಳಿವು ಸಿಕ್ಕಿದೆ. ಶೀಘ್ರದಲ್ಲಿ ಬಂಧಿಸಲಾಗುವುದು. ಆರೋಪಿಗಳ ಪತ್ತೆಗೆ ಐಜಿ ಲೋಕೇಶ ಅವರ ಸೂಚನೆ ಮೇರೆಗೆ ಗಂಗಾವತಿ ಡಿವೈಎಸ್ಪಿ ನೇತೃತ್ವದಲ್ಲಿ ಒಟ್ಟು ಆರು ತಂಡಗಳನ್ನು ರಚಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಶವ ಪತ್ತೆ: ತುಂಗಭದ್ರಾ ಎಡದಂಡೆ ಕಾಲುವೆಗೆ ಆರೋಪಿಗಳಿಂದ ತಳ್ಳಲ್ಪಟ್ಟ ಮೂವರು ಪ್ರವಾಸಿಗರಲ್ಲಿ ಅಮೆರಿಕದ ಡೇನಿಯಲ್ ಹಾಗೂ ಮಹಾರಾಷ್ಟ್ರದ ಪಂಕಜ್ ಎಂಬವರು ಈಜಿ ದಡ ಸೇರಿದ್ದರು. ಆದರೆ ಒಡಿಶಾದ ಬಿಬಾಸ್ (42) ಎಂಬವರು ಕಾಲುವೆಯಲ್ಲಿ ಕೊಚ್ಚಿಹೋಗಿದ್ದು, ಶನಿವಾರ ಬೆಳಗ್ಗೆ ಶವ ಪತ್ತೆಯಾಗಿತ್ತು. ಆರೋಪಿಗಳು ಸಮೀಪದ ಬಾರ್ ಒಂದರಲ್ಲಿ ಮದ್ಯ ಸೇವಿಸಿದ್ದಾರೆ. ಬಳಿಕ ಸುತ್ತಾಡುವ ಉದ್ದೇಶದಿಂದ ಬೈಕ್ನಲ್ಲಿ ತೆರಳಿದ್ದು, ಈ ಸಂದರ್ಭದಲ್ಲಿ ಇಬ್ಬರು ವಿದೇಶಿಗರು, ಇಬ್ಬರು ಹೊರ ರಾಜ್ಯದ ಪ್ರವಾಸಿಗರು ಸೇರಿದಂತೆ ಸ್ಥಳೀಯ ಒಬ್ಬ ಮಹಿಳೆಯರನ್ನೊಳಗೊಂಡ ತಂಡ ಸಿಕ್ಕಿದೆ.
ನಂತರ ಅವರಿಗೆ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ. ಕೊಲೆ ಮಾಡುವ, ಸುಲಿಗೆ ಮಾಡುವ ಉದ್ದೇಶ ಈ ಆರೋಪಿಗಳಿಗೆ ಇರಲಿಲ್ಲ. ಹಣಕ್ಕೆ ಡಿಮ್ಯಾಂಡ್ ಇಟ್ಟಿದರಿಂದ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಇಸ್ರೇಲ್ ಹಾಗೂ ಸ್ಥಳೀಯ ಮಹಿಳೆ ಮೇಲೆ ಇಬ್ಬರ ಮೇಲೆ ದುಷ್ಕೃತ್ಯ ಎಸಗಿರುವುದಾಗಿ ಆರೋಪಿಗಳು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ ಎಸ್ಪಿ ತಿಳಿಸಿದರು. ಸುದ್ದಿಗೋಷ್ಠಿಯ ವೇಳೆ ಹೆಚ್ಚುವರಿ ಎಸ್ಪಿ ಹೇಮಂತಕುಮಾರ್, ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ಇತರ ಪೊಲೀಸ್ ಅಧಿಕಾರಿಗಳು ಇದ್ದರು.