ಹೊಸಶಕೆ ನ್ಯೂಸ್-ಕೊಪ್ಪಳ: ರಾಜ್ಯದಲ್ಲಿ ಪರ್ಯಾಯ ರಾಜಕೀಯ ಪಕ್ಷದ ಅಗತ್ಯವಿದ್ದು ಅದರ ಸ್ಥಾಪನೆಗೆ ತಯಾರಿ ನಡೆದಿದೆ. ಪ್ರತಿ ಜಿಲ್ಲೆಗೂ ತೆರಳಿ ಪ್ರಣಾಳಿಕೆ ಕುರಿತು ಜನರ ಜೊತೆ ಚರ್ಚೆ–ಸಂವಾದ ನಡೆಸಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ಮುಖಂಡರು, ರಾಜ್ಯ ನವ ಕರ್ನಾಟಕ ನಿರ್ಮಾಣ ಆಂದೋಲನದ ಪ್ರಮುಖರಾದ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪರ, ರೈತಪರ ಎಂದು ಹೇಳಿ ಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಜವಾದ ಕಳಕಳಿ ಏನು?, ರೈತರ ಅನುಕೂಲಕ್ಕಾಗಿ ಆವರ್ತ ನಿಧಿ ಸ್ಥಾಪನೆ ಮಾಡಿ ಎಂದರೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ದೂರಿದರು.
ಬಜೆಟ್ ಅಧಿವೇಶನದ ಬಳಿಕ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ್ದು ಮಾತಿನಂತೆ ನಡೆದುಕೊಳ್ಳದಿದ್ದರೆ ಹೋರಾಟ ಮಾಡಲಾಗುವುದು. ವಾರದ ಸಂತೆ, ಮಾಸಿಕ ಸಂತೆ ಮಾಡಲು ಅನೇಕರು ಹಸಿರು ಟವಲ್ ಹಾಕಿಕೊಳ್ಳುವುದನ್ನು ಬಂಡವಾಳ ಮಾಡಿಕೊಂಡಿದ್ದಾರೆ ಅಪಾದಿಸಿರು.
ತಮ್ಮ ಆಡಳಿತದ ಅವಧಿಯಲ್ಲಿ ಮಾಡಿದ ಸಾಲವನ್ನು ಇನ್ನೊಂದು ಸರ್ಕಾರದ ಮೇಲೆ ಹಾಕಿ ಹೋಗುತ್ತಿರುವುದರಿಂದ ದೇಶದ ಆರ್ಥಿಕತೆ ಕುಸಿಯುತ್ತಲೇ ಸಾಗಿದೆ. ಹಾಗಿದ್ದರೂ ಶಾಸಕರ ವೇತನವನ್ನು ಯಾರ ಮಾತೂ ಕೇಳದೆ ಶೇ 50ರಷ್ಟು ಹೆಚ್ಚಿಸಲಾಗುತ್ತಿದೆ. ರಾಜಕಾರಣಿಗಳು ಹೀಗೆಯೇ ಸಾಲದ ಹೊರೆ ಹೊರಿಸುತ್ತ ಹೋದರೆ ಮುಂದಿನ ಪೀಳಿಗೆಯ ಜನರ ಗತಿಯೇನು ಎಂದರು.
ವೇತನ ಪಾವತಿ, ಸಾಲದ ಹಣಕ್ಕೆ ಬಡ್ಡಿ, ಗ್ಯಾರಂಟಿಗೆ ಅನುದಾನ ಹೀಗೆ ಸಾಕಷ್ಟು ಹಣ ಖರ್ಚಾದರೆ ದುರ್ಬಲ ವರ್ಗದ ಜನರ ಏಳಿಗೆಗೆ ಯೋಜನೆ ರೂಪಿಸುವುದು ಯಾವಾಗ? ಆರೋಗ್ಯ, ಶಿಕ್ಷಣಕ್ಕೆ ಹಣ ನೀಡುವುದು ಯಾವಾಗ? ರೈತ ತಾನು ಬೆಳೆದ ಬೆಳೆಗಳಿಗೆ ತಾನೇ ಬೆಲೆ ನಿರ್ಧಾರ ಮಾಡುವುದು ಯಾವಾಗ? ರೈತರನ್ನು ಬಲವರ್ಧನೆ ಮಾಡಲು ಬಂಡವಾಳ ಸಂಪತ್ತಿನ ಸೃಷ್ಟಿಗೆ ಹೂಡಿಕೆ ಮಾಡಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಈ ಕೆಲಸ ಮಾಡುತ್ತಿಲ್ಲ ಎಂದು ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹನುಮಂತಪ್ಪ ಹೊಳೆಯಾಚೆ, ಮುಖಂಡರಾದ ಎಂ.ಗೋಪಿನಾಥ, ಶಿವಪುತ್ರಪ್ಪ, ಎಂ.ಕೆ.ಜಗ್ಗೇಶ ಇತರರು ಹೇಳಿದರು.
== ಉಳ್ಳವರನ್ನು ಮೆಚ್ಚಿಸಲು ಸರ್ಕಾರಗಳು ಪ್ರತಿವರ್ಷವೂ ಸಾಲ ಮಾಡುತ್ತ ಬಜೆಟ್ ಗಾತ್ರ ಹೆಚ್ಚಿಸುತ್ತಿವೆ. ತಮ್ಮ ಅಧಿಕಾರ ಮುಗಿಯುವಷ್ಟರಲ್ಲಿ ಸಾಕಷ್ಟು ಸಾಲ ಮಾಡಿ ಅದರ ಭಾರ ಜನರ ಮೇಲೆ ಹಾಕುತ್ತಿವೆ. ಆದ್ದರಿಂದ ಆಡಳಿತ ನಡೆಸುವ ಸರ್ಕಾರಗಳು ತಮ್ಮ ಅವಧಿಯಲ್ಲಿ ಮಾಡಿದ ಸಾಲವನ್ನು ಅವಧಿ ಮುಗಿಯವುದರ ಒಳಗೆ ತಾವೇ ತೀರಿಸಬೇಕು : ಕೋಡಿಹಳ್ಳಿ ಚಂದ್ರಶೇಖರ , ರಾಜ್ಯ ನವ ಕರ್ನಾಟಕ ನಿರ್ಮಾಣ ಆಂದೋಲನದ ಪ್ರಮುಖರು