ಹೊಸಶಕೆ ನ್ಯೂಸ್-ಕೊಪ್ಪಳ: ನೊಂದ ಮನಗಳಿಗೆ ಮುದ ನೀಡುವ ಶಕ್ತಿ ಸಂಗೀತಕ್ಕಿದೆ. ಬೇಸರಗೊಂಡ ಮನಕ್ಕೆ ಖುಷಿಯನ್ನು ನೀಡುವ ಶಕ್ತಿ ನೃತ್ಯಕ್ಕಿದೆ. ಜೀವನವೇ ಒಂದು ಕಲಾ ಸೌಂದರ್ಯದ ಪುಂಜ ನಮ್ಮ ನಾಡಿನ ಕಲೆ ಸಾಹಿತ್ಯ ಸಂಗೀತಕ್ಕೂ ಆಧ್ಯಾತ್ಮಕ್ಕೂ ಅನ್ಯೋನ್ಯ ಸಂಬಂಧವಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಬ್ರಹ್ಮಕುಮಾರಿ ಯೋಗಿನಿ ಅಕ್ಕ ಹೇಳಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ‘ಜರುಗಿದ ‘ಸಾಂಸ್ಕೃತಿಕ ಮಹೋತ್ಸವ ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲೆ, ಸಾಹಿತ್ಯ, ಸಂಸ್ಕೃತಿಯ ಆಶ್ರಯ ತಾಣವೇ ದೇವಾಲಯ. ಇಲ್ಲಿ ಶಿಲ್ಪಕಲೆ, ಸಂಗೀತ ಕಲೆ, ನೃತ್ಯ ಕಲೆ ಇದೆ. ಯಾವುದೇ ಕಲೆ ಸಾಹಿತ್ಯ ಸಂಗೀತ ಜನರ ಜೀವನದಲ್ಲಿ ಮೌಲ್ಯ ಬಿತ್ತುವಂತಾಗಿರಬೇಕು ಜನರ ಅಂತರಂಗವನ್ನು ಅರಳಿಸುವಂತದ್ದಾಗಿರಬೇಕು, ಚಂಚಲ ಮನಸ್ಸನ್ನು ಪರಮಾತ್ಮನ ಕಡೆಗೆ ಕೊಂಡೊಯ್ಯುವಂತದ್ದಾಗಿರಬೇಕು. ಇಂತಹ ಸಂಗೀತ, ನೃತ್ಯಕ್ಕೆ ಪ್ರೋತ್ಸಾಹಿಸಿದಾಗ ಸಮಾಜದಲ್ಲಿ ನೈತಿಕ ಮೌಲ್ಯಗಳು ಜಾಗೃತವಾಗುತ್ತವೆ. ಸಚ್ಚಾರಿತ್ರ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದರು.
ವಿವಿಧ ಶಾಲೆಗಳಿಂದ ಮಕ್ಕಳು ಆಗಮಿಸಿ ಸಂಗೀತ, ನೃತ್ಯ, ರೂಪಕಗಳ ಮೂಲಕ ಜನಮನ ಸೆಳೆದರು. ಸಾರ್ವಜನಿಕರು ಮಕ್ಕಳ ಅದ್ಭುತ ಪ್ರತಿಭೆಯನ್ನು ನೋಡಿ ಮಂತ್ರಮುಗ್ಧರಾದರು. ನಗರದ ಈಶ್ವರ ಗುಡಿ ಆವರಣದಲ್ಲಿ ಸಂಜೆ 6:30 ರಿಂದ 7:30ರ ವರೆಗೆ ನಡೆಯುವ ಮನಶಾಂತಿಗಾಗಿ ಶಿವಧ್ಯಾನ ಶಿಬಿರ ಲಾಭ ಪಡೆಯಲು ತಿಳಿಸಿದರು.