ಹೊಸ ಶಕೆ ನ್ಯೂಸ್ ,ಯಲಬುರ್ಗಾ,::ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಗ್ರಾಮ ಆಡಳಿತ ಅಧಿಕಾರಿಗಳು 4ನೆಯ ದಿನ ಮುಷ್ಕರ ಆರಂಭಿಸಿದರು.
ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಕೇಂದ್ರ ಸಂಘದ ಆದೇಶದ ಮೇರೆಗೆ ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕಗಳಲ್ಲಿ 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ.
ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಕಪ್ಪು ಬಟ್ಟೆ ಧರಿಸಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಸರಕಾರದ ವಿರುದ್ಧ ಶಾಂತಯುತವಾಗಿ ಘೋಷಣೆ ಕೂಗಿ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಅವರ ಆಪ್ತ ಕಾರ್ಯದರ್ಶಿಗಳ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವನಗೌಡ ರಾಮಶೆಟ್ಟರ ಮಾತನಾಡಿ, ಇ-ಪೌತಿ ಖಾತಾ ಆಂದೋಲನ ಕೈಬಿಡಬೇಕು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಉತ್ತಮ ಗುಣಮಟ್ಟದ ಟೇಬಲ್ ಮತ್ತು ಕುರ್ಚಿ, ಗುಣಮಟ್ಟದ ಮೊಬೈಲ್ ಫೋನ್, ಸಿಯುಜಿ ಸಿಮ್ ಮತ್ತು ಡೇಟಾ, ಗೂಗಲ್ ಕ್ರೋಮ್ ಬುಕ್, ಲ್ಯಾಪ್‌ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ಕಲ್ಪಿಸಬೇಕು. ಪ್ರಯಾಣ ಭತ್ಯೆ ಹೆಚ್ಚಿಸಬೇಕು ಎಂದು ಹೇಳಿದರು.
ತಾಲೂಕ ಘಟಕದ ಅಧ್ಯಕ್ಷ ಮಂಜುನಾಥ ಮೇಟಿ ಮಾತನಾಡಿ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಧರಣೆ ನಡೆಸಲಾಗುತ್ತಿದೆ.
ಈ ವೇಳೆ ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಈವರೆಗೆ ಯಾವುದೇ ಬೇಡಿಕೆ ಈಡೇರಿಸಿಲ್ಲ. ಬದಲಿಗೆ ಕೆಲಸದ ಒತ್ತಡ ಹೆಚ್ಚಿಸಲಾಗಿದೆ ಎಂದು ಆರೋಪಿಸಿದರು.
ಈ ಪ್ರತಿಭಟನೆಯಲ್ಲಿ ಕಂದಾಯ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಶಾಸ್ತ್ರಿ ಮಠ,ಸ.ನೌ. ಸಂಘದ ಅಧ್ಯಕ್ಷ ಸಿದ್ದಲಿಂಗಪ್ಪ ಶಾಗೋಟಿ, ರಾಜ್ಯ ಪರಿಷತ್ ಸದಸ್ಯ ಶಿವಪುತ್ರಪ್ಪ ತಿಪ್ಪನಾಳ, ಮಂಜುನಾಥ ಮುರುಡಿ, ಶಿವಕುಮಾರ ಐನಕ್ಕಿ, ಶೃತಿ ಮಾಕಾಪುರ, ಬಸವರಾಜ ಅಂಗಡಿ, ಶಂಕ್ರಯ್ಯ, ಪುಂಡಲಿ ಕುಂಬಾರ ಶ್ರೀನಿವಾಸಲು, ದೇವರಾಜ ರೆಡ್ಡಿ, ಬಾಲನಗೌಡ್ರು, ಶಿವಶರಣಪ್ಪ ಗೌಡ, ಕುಮಾರ ಪರ್ಸಾಪುರ, ರಾಜಶೇಖರ ಹಿರೇಮಠ, ಮಾರುತಿ ಪೂಜಾರ,ರತ್ನಾ,ಜಯಶ್ರೀ, ಜಯಲಕ್ಷ್ಮಿ, ಶಿವಕುಮಾರ ಹೂಗಾರ, ಶಂಭು, ದುರಗಪ್ಪ,ಕರಿಯಪ್ಪ ಸೇರಿದಂತೆ ಇತರರು ಇದ್ದರು.