ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ: ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆ
ಹೊಸಶಕೆ ನ್ಯೂಸ್-ಕೊಪ್ಪಳ: ಮಗುವಿನ ಆರೋಗ್ಯದ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸಲು ಮತ್ತು ನಿಗದಿತ ಸಮಯಕ್ಕೆ ಲಸಿಕೆ ಹಾಕುವಂತೆ ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು ಸೂಕ್ತ ಸಮಯದಲ್ಲಿ ತಿಳಿವಳಿಕೆ ಮೂಡಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಲಸಿಕೆಯಿಂದ ಯಾವುದೇ ಮಗು ವಂಚಿತವಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಸೂಚನೆ ನೀಡಿದರು.
ಸೋಮವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಜಿಲ್ಲೆಯಲ್ಲಿನ ತಾಯಿ-ಮಗು ಮರಣ ಸಂಖ್ಯೆಯನ್ನು ತಗ್ಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಹಾಗೂ ಮಾರ್ಚ್ ಅಂತ್ಯದವರೆಗೂ ಯಾವುದೇ ತಾಯಿ-ಮಗು ಮರಣ ಪ್ರಕರಣ ದಾಖಲಾಗದಂತೆ ಕ್ರಮ ವಹಿಸಿ. ಅಧಿಕಾರಿ, ವೈದ್ಯರ ಕರ್ತವ್ಯದಲ್ಲಿ ಪ್ರಾಮಾಣಿಕತೆ ಇರಲಿ ಎಂದರು.
ಮಗು ಜನಿಸಿದ 24 ಗಂಟೆಯೊಳಗೆ ಹಾಕಬೇಕಾದ ಕಡ್ಡಾಯ ಲಸಿಕೆಗಳು, ಮಗುವಿನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಹಾಕಬೇಕಾದ ಲಸಿಕೆಗಳು, ಲಸಿಕೆಯಿಂದ ಮಗುವಿಗೆ ಆಗುವ ಆರೋಗ್ಯ ಪ್ರಯೋಜನಗಳು, ಲಸಿಕೆ ಹಾಕಿಸದೇ ಇರುವುದರಿಂದ ಆಗುವ ತೊಂದರೆಗಳು ಸೇರಿದಂತೆ ನಾನಾ ವಿಷಯಗಳ ಬಗ್ಗೆ ಪ್ರತಿಯೊಬ್ಬ ತಾಯಂದಿರಿಗೆ ಗೊತ್ತಿರಬೇಕು. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ಅವರಿಗೆ ತಿಳಿವಳಿಕೆ ಮೂಡಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ಮಾತನಾಡಿ, ಅರ್ಹವಿರುವ ಪ್ರತಿಯೊಬ್ಬ ಮಗುವಿಗೂ ಲಸಿಕೆ ಹಾಕಿಸಲು ಕ್ರಮಕೈಗೊಳ್ಳಬೇಕು. ಈ ಕಾರ್ಯಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯವರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಲಿಂಗರಾಜು ಟಿ., ಎಸ್.ಎಂ.ಓ ಡಾ.ಶ್ರೀಧರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವೀಂದ್ರನಾಥ ಎಂ.ಹೆಚ್., ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ್, ಸ್ತ್ರೀರೋಗ ತಜ್ಞರಾದ ಡಾ. ಈಶ್ವರ ಸವಡಿ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಪ್ರಕಾಶ ಹೆಚ್. ಸೇರಿದಂತೆ ಎಲ್ಲಾ ತಾಲೂಕುಗಳ ಆರೋಗ್ಯಾಧಿಕಾರಿಗಳು, ತಜ್ಞ ವೈದ್ಯರು, ವೈದ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
