ಕುಟುಂಬಸ್ಥರಿಗೆ ಸಾಂತ್ವನ, ಜಾಮೀನಿಗೆ ಯಾರ ನೆರವು ಇಲ್ಲ
ಹೊಸಶಕೆ ನ್ಯೂಸ್-ಕೊಪ್ಪಳ: ಹತ್ಯೆಗೀಡಾದ ಯುವಕ ಗವಿಸಿದ್ಧಪ್ಪ ನಾಯಕ ಅವರ ಮನೆಗೆ ಗುರುವಾರ ಭೇಟಿ ನೀಡಿದ ಕೊಪ್ಪಳದ ಮುಸ್ಲಿಂ ಸಮಾಜದ ಪ್ರಮುಖರು ಸಾಂತ್ವನ ಹೇಳಿ, ನಾವೆಲ್ಲರೂ ಭಾವೈಕ್ಯದಿಂದ ಇದ್ದೇವೆ. ಈ ಬಾಂಧವ್ಯಕ್ಕೆ ಕೊಳ್ಳಿ ಇಟ್ಟು ಗವಿಸಿದ್ಧಪ್ಪ ನಾಯಕನ ಕೊಲೆಗೆ ಕಾರಣರಾದ ಮುಸ್ಲಿಂ ಕುಟುಂಬಗಳಿಗೆ ಸಮುದಾಯದ ವತಿಯಿಂದ ಜಾಮೀನು ಸೇರಿದಂತೆ ಯಾವುದೇ ವಿಚಾರಕ್ಕೂ ನೆರವು ನೀಡುವುದಿಲ್ಲ ಎಂದು ಹೇಳಿದರು.
ಕೊಲೆಯಾದ ಯುವಕನಿಗೆ ನ್ಯಾಯ ಸಿಗುವ ತನಕ ನಿಮ್ಮೊಂದಿಗೆ ನಾವು ಹೋರಾಡುತ್ತೇವೆ, ಕುಟುಂಬದವರಿಗೆ ಹಲವು ಮುಖಂಡರು ಭರವಸೆ ನೀಡಿದರು. ನಾವೆಲ್ಲರೂ ಒಂದೇ ಓಣಿಯಲ್ಲಿ ಇದ್ದವರು. ಘಟನೆ ನಡೆದ ದಿನದಿಂದಲೂ ಗವಿಸಿದ್ಧಪ್ಪನ ಕುಟುಂಬದವರ ಜತೆ ಇದ್ದೇವೆ. ನಮ್ಮ ಸಮಾಜದಲ್ಲಿ ಸಭೆ ಮಾಡಿದ್ದು ದುಷ್ಕೃತ್ಯ ಎಸಗಿದವರಿಗೆ ಯಾವುದೇ ಸಹಕಾರ ನೀಡುವುದಿಲ್ಲ. ಘಟನೆ ಬಳಿಕವೂ ಸಾಮಾಜಿಕ ತಾಣದಲ್ಲಿ ಸಮಾಜದ ಸ್ವಾಸ್ಥ ಹಾಳು ಮಾಡುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಾವೇ ದೂರು ನೀಡುತ್ತೇವೆ ಎಂದು ನಗರಸಭೆ ಅಧ್ಯಕ್ಷರೂ ಆದ ಮುಸ್ಲಿಂ ಸಮಾಜದ ಮುಖಂಡ ಅಮ್ಜದ್ ಪಟೇಲ್ ತಿಳಿಸಿದರು.
ಆರೋಪಿಗಳು ಮತ್ತು ಕೊಲೆಗೆ ಪ್ರಚೋದನೆ ನೀಡಿದ ಕುಟುಂಬಗಳಿಗೆ ಯಾವುದೇ ನೆರವು ನೀಡುವುದಿಲ್ಲ ಎಂದು ಫತ್ವಾ ಹೊರಡಿಸಬೇಕು ಎಂದು ಗವಿಸಿದ್ಧಪ್ಪ ನಾಯಕ ಅವರ ಕುಟುಂಬದವರು ಒತ್ತಾಯಿಸಿದರು. ಕೊಲೆಯಾದ ಬಳಿಕ ಮುಸ್ಲಿಮರು ನಮಾಜ್ ಮಾಡಿ ಸಂಭ್ರಮಿಸಿದ್ದಾರೆ ನಮ್ಮ ಮಗ ಸತ್ತಾಗ ನಿಮಗೆ ಸಂಭ್ರಮವೇ? ಎಂದು ಅವರ ಸಹೋದರಿ ಅನ್ನಪೂರ್ಣ ಆಕ್ರೋಶಭರಿತರಾಗಿ ಪ್ರಶ್ನೆ ಮಾಡಿದರು. ನಾವು ಯಾವುದೇ ಸಂಭ್ರಮ ಮಾಡಿಲ್ಲ. ಮನುಷ್ಯತ್ವ ಇರುವ ಯಾರೂ ಆ ರೀತಿ ಮಾಡುವುದಿಲ್ಲ ಎಂದು ಕಾಟನ್ ಪಾಷಾ ಹಾಗೂ ಇತರರು ಸಮಾಧಾನ ಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮುಸ್ಲಿಂ ಯುನಿಟಿ ಜಿಲ್ಲಾಧ್ಯಕ್ಷ ಮಹಮ್ಮದ್ ಜಿಲಾನ್ ಕಿಲ್ಲೇದಾರ್, ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಡಿ ಆಸೀಫ್ ಕರ್ಕಿಹಳ್ಳಿ, ರಾಬ್ಟೆ ಮಿಲ್ಲತ್ ಸಂಘಟನೆ ಪ್ರಮುಖ ಲಾಯಖ್ ಅಲಿ, ಸಮಾಜದ ಮುಖಂಡರಾದ ಅಜೀಮ್ ಅತ್ತಾರ್, ಮಾನ್ವಿ ಪಾಷಾ, ಮೌಲಾಹುಸೇನ್ ಜಮೇದಾರ, ಹುಸೇನ್ ಪೀರಾ ಮುಜಾವರ, ಮುಸ್ತಫಾ ಕುದರಿಮೋತಿ, ಸಾಧಿಕ್ ಅತ್ತಾರ್, ಆರ್.ಎಂ. ರಫಿ, ಗಫಾರ್ ದಿಡ್ಡಿ ಸೇರಿದಂತೆ ಇತರರು ಇದ್ದರು.