ಹೊಸಶಕೆ ನ್ಯೂಸ್-ಕಾರಟಗಿ:ಸಂಗನಬಸವ ಮಹಾಶಿವಯೋಗಿ ಮತ್ತು ಕೊಟ್ಟೂರು ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೂದಗುಂಪಾ ಶಾಖಾ ಮಠದ ಸಿದ್ದೇಶ್ವರ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ಸೋಮವಾರ ಶ್ರದ್ಧಾ, ಭಕ್ತಿಯೊಂದಿಗೆ ನೆರವೇರಿತು.
ತಾಲ್ಲೂಕಿನ ಬೂದಗುಂಪಾ-ತಿಮ್ಮಾಪುರ-ಹಾಲಸಮುದ್ರ ಐತಿಹಾಸಿಕ ಎನ್ನುವಂತೆ ಕೊಟ್ಟೂರು ಸ್ವಾಮಿ ಗುರುಪರಂಪರೆ ಶಾಖಾ ವಿರಕ್ತ ಮಠದಲ್ಲಿ ತ್ರಿವಳಿ ಗ್ರಾಮಸ್ಥರಿಂದ ಕಳೆದ 3 ದಿನಗಳಿಂದ ಹಬ್ಬದ ವಾತಾವಣದಲ್ಲಿ ಪಟ್ಟಾಧಿಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಅವರು ನೂತನ ಶ್ರೀಗಳಿಗೆ ಬ್ರಹ್ಮೋಪದೇಶ ಬೋಧಿಸಿದರು.
ಸಿದ್ದೇಶ್ವರ ದೇಸಿಕರ ನಿರಂಜನರ ಹೆಸರನ್ನು ನಿರಂಜನ ಪ್ರಣವ ಸ್ವರೂಪ ‘ಸಿದ್ದೇಶ್ವರ ಸ್ವಾಮೀಜಿ’ ಎಂದು ಘೋಷಿಸಿ, ದೀಕ್ಷೆಯ ಧಾರ್ಮಿಕ ವಿಧಿ, ವಿಧಾನಗಳನ್ನು ಪೂರೈಸಲಾಯಿತು. ಸುವರ್ಣಗಿರಿ ವಿರಕ್ತಮಠ, ವಳಬಳ್ಳಾರಿ-ನದಿಚಾಗಿಯ ಸಿದ್ದಲಿಂಗ ಸ್ವಾಮೀಜಿ, ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ-ಬಳ್ಳಾರಿ-ಹಾಲಕೆರೆ ಹಂಪಿ ಹೇಮಕೂಟ ಶೂನ್ಯ ಸಿಂಹಾಸನಾಧೀಶ್ವರ ಕೊಟ್ಟೂರು ಬಸವಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ‘ಮಠಗಳು ಸಮಾಜ ಸೇವೆಯ ಜತೆಗೆ ಸರ್ವರ ಬೆಳವಣಿಗೆಯಲ್ಲಿ ಮಹತ್ತರ ಕೊಡುಗೆ ನೀಡುತ್ತಿವೆ. ಐತಿಹಾಸಿಕ ಗುರುಪರಂಪರೆಯ ಶಾಖಾ ವಿರಕ್ತ ಮಠಕ್ಕೆ ಭಕ್ತರ ಇಚ್ಛೆಯಂತೆ ಗುರು ಆಗಮಿಸಿದ್ದಾರೆ. ಗ್ರಾಮಸ್ಥರು ಪಟ್ಟಾಧಿಕಾರ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ’ ಎಂದು ಹೇಳಿದರು.
ರೋಣ ಶಾಸಕ ಜಿ.ಎಸ್. ಪಾಟೀಲ್, ಮಾಜಿ ಶಾಸಕ ಬಸವರಾಜ ದಢೇಸೂಗುರು, ಮಾಜಿ ಸಂಸದ ಶಿವರಾಮೇಗೌಡ ಮಾತನಾಡಿದರು.
ಸಂತೆಕೆಲ್ಲೂರು ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ, ಹಾವೇರಿ ಹುಕ್ಕೇರಿಮಠ ಸದಾಶಿವ ಸ್ವಾಮೀಜಿ, ಮಣಕವಾಡದ ದೇವಮಂದಿರ ಮಹಾಮಠದ ಅಭಿನವ ಮೃತ್ಯಂಜಯ ಸ್ವಾಮೀಜಿ, ದರೂರು ಸಂಗನಬಸವೇಶ್ವರ ವಿರಕ್ತಮಠದ ಕೊಟ್ಟೂರು ಸ್ವಾಮೀಜಿ, ಗರಗ- ನಾಗಲಾಪುರದ ಒಪ್ಪತ್ತೇಶ್ವರಸ್ವಾಮಿ, ನಿರಂಜನಪ್ರಭು ಸ್ವಾಮೀಜಿ, ಸೋಮಸಮುದ್ರ ಕೊಟ್ಟೂರುಸ್ವಾಮಿ ಶಾಖಾ ವಿರಕ್ತಮಠದ ಸಿದ್ದಲಿಂಗ ದೇಶಿಕರು, ಶ್ರೀಧರಗಡ್ಡೆ ಕೊಟ್ಟೂರು ಶಾಖಾ ವಿರಕ್ತಮಠದ ಕೊಟ್ಟೂರುಸ್ವಾಮಿ, ಸಂಗನಾಳ ಅನ್ನದಾನೇಶ್ವರ ಶಾಖಾ ಮಠದ ವಿಶ್ವೇಶ್ವರ ದೇವರು ಉಪಸ್ಥಿತರಿದ್ದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಕಳಕನಗೌಡ ಪಾಟೀಲ, ಗ್ರಾ.ಪಂ ಅಧ್ಯಕ್ಷೆ ದೇವಮ್ಮ ಬೆಳ್ಳಿಕಟ್ಟಿ, ಉಪಾಧ್ಯಕ್ಷ ಭೀಮನಗೌಡ ಜುಟ್ಲದ, ಪ್ರಮುಖರಾದ ಗುರುಸಿದ್ದಪ್ಪ ಯರಕಲ, ಶರಣೇಗೌಡ ಮಾಲಿಪಾಟೀಲ, ಅಮರಗುಂಡಪ್ಪ ಕೋರಿ, ಬಸವರಾಜಪ್ಪ ಚಳ್ಳೂರು, ಪರಮೇಶ್ವರಪ್ಪ ಕೊಂತನೂರು ಪೊಲೀಸ್ ಪಟೇಲ, ಮಹೇಶಸ್ವಾಮಿ ಕುಲಕರ್ಣಿ, ಕೆ.ಭಾರತೀಶ ಕೆಂಡದ ಸಹಿತ ತ್ರಿವಳಿ ಗ್ರಾಮಗಳ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಗ್ರಾಮದಲ್ಲಿ ನೂತನ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು. ಪೂರ್ಣಕುಂಭ, ಕಳಸ ಹೊತ್ತ ಸುಮಂಗಲೆಯರು, ವಾದ್ಯಮೇಳಗಳು ಮೆರವಣಿಗೆಯ ಕಳೆ ಹೆಚ್ಚಿಸಿತ್ತು.
++++++++++++++++±+
‘ಮಠಗಳ, ಶ್ರೀಗಳ ಪಾವಿತ್ರ್ಯತೆ ಕಾಪಾಡಲಿ’: ಗವಿಶ್ರೀ
5001 ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮದಲ್ಲಿ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಮಾತನಾಡಿ, ‘ಹಿರಿಯ ಶ್ರೀಗಳು ಬೂದಗುಂಪಾ, ತಿಮ್ಮಾಪುರ, ಹಾಲಸಮುದ್ರ ಸಹಿತ ತಾಲ್ಲೂಕಿನ ಸಮಸ್ತರ ಸೇವೆಗೆ ಸಿದ್ದೇಶ್ವರ ಶ್ರೀಗಳನ್ನು ಕಳುಹಿಸಿದ್ದಾರೆ. ಅವರೀಗ ಸಮಾಜದ ಮಗ. ಸೇವೆಗೆ ಸದಾ ಸಿದ್ಧರಾಗಿ ಈ ಭಾಗಕ್ಕೆ ಬಂದಿರುವುದು ನಿಮ್ಮ ಸೌಭಾಗ್ಯ. ಶರಣ ಪರಂಪರೆಯ ಮಠಗಳು ಸದಾ ಅನ್ನ, ಅಕ್ಷರ, ಆರೋಗ್ಯ ಮೊದಲಾದವುಗಳೊಂದಿಗೆ ಸೇವೆ ಸಲ್ಲಿಸುತ್ತಿವೆ. ರಾಜಕೀಯ ಕರಿನೆರಳು ಬೀಳದಂತೆ ಜಾಗೃತಿ ವಹಿಸಿದರೆ ಮಠಗಳ, ಶ್ರೀಗಳ ಪಾವಿತ್ರ್ಯತೆ ಕಾಪಾಡಿದಂತಾಗುವುದು’ ಎಂದರು.
ಶಿರಹಟ್ಟಿಯಫಕೀರೇಶ್ವರ ದಿಂಗಾಲೇಶ್ವರರು ಮಾತನಾಡಿ, ‘ಸಿದ್ದೇಶ್ವರ ಶ್ರೀಗಳು ಇಲ್ಲಿಗೆ ಬಂದಿರುವುದು ನಿಮ್ಮ ಸೌಭಾಗ್ಯ. ಮಠದ ಅಭಿವೃದ್ಧಿಯೊಂದಿಗೆ ಭಕ್ತರ ಹಾಗೂ ಸರ್ವರ ಬೆಳವಣಿಗೆಗಳ ಕಾರ್ಯಕ್ಕೆ ಸಮಸ್ತ ಜನರು ಕೈಜೋಡಿಸಬೇಕು’ ಎಂದು ಹೇಳಿದರು.
ಕೊಟ್ಟೂರು ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಂಎಲ್‌ಸಿ ಬಸನಗೌಡ ಬಾದರ್ಲಿ ದಾನಿಗಳಾದ ಕೆ.ವೆಂಕಾರಡ್ಡೆಪ್ಪ, ಜಿ.ಲಿಂಗರಾಜ, ಕೆ.ನಾಗೇಶ್ವರರಾವ, ಹಂಚಿನಾಳಕ್ಯಾಂಪ್‌ನ ಶಂಭಣ್ಣ ಸಾಹುಕಾರ ಸಹಿತ ಅನೇಕ ವಾಣಿಜ್ಯೋದ್ಯಮಿಗಳು ಉಪಸ್ಥಿತರಿದ್ದರು.